ADVERTISEMENT

ರಾಜೇಶ್ ತಲ್ವಾರ್‌ಗೆ ಫೆ. 4ರವರೆಗೆ ಬಂಧನ ಇಲ್ಲ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ನವದೆಹಲಿ (ಪಿಟಿಐ): ಆರುಷಿ ಮತ್ತು ಮನೆಯ ಸಹಾಯಕ ಹೇಮರಾಜ್ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಆರುಷಿ ತಂದೆ, ಡಾ. ರಾಜೇಶ್ ತಲ್ವಾರ್ ಅವರಿಗೆ ನೀಡಿರುವ ಜಾಮೀನು ಫೆ. 4ರವರೆಗೂ ಜಾರಿಯಲ್ಲಿರುವ ಕಾರಣ ಅವರನ್ನು ಬಂಧಿಸಬಾರದು ಎಂದು ಸುಪ್ರೀಂಕೋರ್ಟ್ ಸೋಮವಾರ ಸೂಚಿಸಿದೆ.

ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ದಂಪತಿ, ಆರುಷಿ ತಂದೆ ರಾಜೇಶ್ ತಲ್ವಾರ್ ಮತ್ತು ತಾಯಿ ನೂಪುರ್ ತಲ್ವಾರ್ ಅವರನ್ನು ವಿಚಾರಣೆಗೆ ಗುರಿಪಡಿಸಬೇಕು ಎಂದು ಅಧೀನ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶಕ್ಕೆ ನೀಡಿದ್ದ ತಡೆಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತೆರವುಗೊಳಿಸಿತು. ಆದ್ದರಿಂದ ರಾಜೇಶ್ ತಮ್ಮನ್ನು ಬಂಧಿಸಬಹುದು ಎಂದು ಆತಂಕಗೊಂಡಿದ್ದರು.

ನ್ಯಾಯಮೂರ್ತಿಗಳಾದ ಎ.ಕೆ. ಗಂಗೂಲಿ ಮತ್ತು ಜೆ.ಎಸ್. ಖೇಹರ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು, ರಾಜೇಶ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದ ಮುಂದಿನ ಯಾವುದೇ ವಿಚಾರಣೆಯನ್ನು ಫೆ. 4ರಂದು ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವ ಗಾಜಿಯಾಬಾದ್ ನ್ಯಾಯಾಲಯವೇ ನಡೆಸಲಿದೆ ಎಂದು ಹೇಳಿದೆ.

ರಾಜೇಶ್ ಪೊಲೀಸರಿಗೆ ಮಾಹಿತಿ ನೀಡದೆ ಊರು ಬಿಡುವಂತಿಲ್ಲ ಮತ್ತು ಅವರ ಪಾಸ್‌ಪೋರ್ಟ್ ಅನ್ನು ಮ್ಯಾಜಿಸ್ಟ್ರೇಟ್‌ರ ವಶಕ್ಕೆ ಒಪ್ಪಿಸಬೇಕು ಎಂಬ ಷರತ್ತನ್ನು ನ್ಯಾಯ ಪೀಠ ವಿಧಿಸಿದೆ.

 ಇದಕ್ಕೆ ಆಕ್ಷೇಪಗಳಿದ್ದರೆ ಅಧೀನ ನ್ಯಾಯಾಲಯದ ಮೊರೆ ಹೋಗಲು ಸಿಬಿಐಗೆ ನ್ಯಾಯ ಪೀಠ ಅವಕಾಶ ನೀಡಿದೆ. ಅತ್ಯಂತ ಕುತೂಹಲಕರ ತಿರುವುಗಳನ್ನು ಪಡೆಯುತ್ತಿರುವ ಆರುಷಿಯ ಕೊಲೆ 2008ರ ಮೇ 15- 16ರ ಮಧ್ಯರಾತ್ರಿಯಲ್ಲಿ ನಡೆದಿತ್ತು. ಮರು ದಿವಸ ಮನೆಯ ಸಹಾಯಕನಾಗಿದ್ದ ಹೇಮರಾಜ್‌ನ ಶವ ರಾಜೇಶ್ ಅವರ ಮನೆ ತಾರಸಿ ಮೇಲೆ ಪತ್ತೆ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.