ADVERTISEMENT

ರಾಜ್ಯಕ್ಕೆ ಒಂದಷ್ಟು...

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ನವದೆಹಲಿ: ನಿರೀಕ್ಷೆಯಂತೆ ರೈಲ್ವೆ ಬಜೆಟ್ ರಾಜ್ಯಕ್ಕೆ ನಿರಾಸೆ ಉಂಟುಮಾಡಿಲ್ಲ. ಕೇಳಿದ್ದೆಲ್ಲ ಸಿಗದಿದ್ದರೂ ಪರವಾಗಿಲ್ಲವೆನ್ನುವ ಮಟ್ಟಿಗೆ ರಾಜ್ಯದ ಬೇಡಿಕೆಗಳಿಗೆ 2012- 13ಸಾಲಿನ ರೈಲ್ವೆ ಬಜೆಟ್‌ನಲ್ಲಿ ಮನ್ನಣೆ ದೊರೆತಿದೆ. ಧಾರವಾಡ-ಬೆಳಗಾವಿ ಸೇರಿದಂತೆ ಐದು ಹೊಸ ರೈಲು ಮಾರ್ಗಗಳು, ಕೋಲಾರದಲ್ಲಿ ಬೋಗಿಗಳ ತಯಾರಿಕಾ ಘಟಕ, ಬೆಂಗಳೂರಲ್ಲಿ `ಸುರಕ್ಷತಾ ಗ್ರಾಮ~ದ ಹೆಸರಲ್ಲಿ ತುರ್ತು ಪರಿಹಾರ ಕಾರ್ಯಗಳ ತರಬೇತಿ ಕೇಂದ್ರ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳನ್ನು ಪ್ರಕಟಿಸಲಾಗಿದೆ.

ಮೈಸೂರು- ಶಿರಡಿ, ಮೈಸೂರು- ಶ್ರವಣಬೆಳಗೊಳ ಸೇರಿದಂತೆ ರಾಜ್ಯಕ್ಕೆ ಹೊಸದಾಗಿ ಏಳು ಎಕ್ಸ್‌ಪ್ರೆಸ್ ಮತ್ತು ಮೂರು ಪ್ಯಾಸೆಂಜರ್ ರೈಲುಗಳನ್ನು ಬಿಡುವುದಾಗಿ ಘೋಷಿಸಲಾಗಿದೆ. ಆರು ರೈಲುಗಳ ಓಡಾಟವನ್ನು ವಿಸ್ತರಿಸಲಾಗುತ್ತಿದೆ. ಏಳು ರೈಲುಗಳ ಓಡಾಟವನ್ನು ಹೆಚ್ಚಿಸಲಾಗಿದೆ. ಸುಮಾರು ಒಂದು ಗಂಟೆ 40 ನಿಮಿಷಗಳ ಬಜೆಟ್ ಭಾಷಣದಲ್ಲಿ ರೈಲ್ವೆ ಸಚಿವ ದಿನೇಶ್ ತ್ರಿವೇದಿ, `ಯೋಜನಾ ವೆಚ್ಚ ಹಂಚಿಕೊಳ್ಳಲು ಮುಂದೆ ಬಂದಿರುವ ರಾಜ್ಯಗಳ ಪ್ತಸ್ತಾವಗಳಿಗೆ ವಿಶೇಷ ಗಮನ ಕೊಡಲಾಗಿದೆ.

ಇದರಿಂದ ಯೋಜನೆಗಳನ್ನು ತ್ವರಿತವಾಗಿ ಮುಗಿಸಲು ಸಾಧ್ಯವಾಗಲಿದೆ. ಈ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಸೇರಿದೆ~ ಎಂದು ಹೇಳಿದರು.

ADVERTISEMENT

ಧಾರವಾಡ-ಬೆಳಗಾವಿ, ಗದಗ-ಹಾವೇರಿ, ಗದಗ-ವಾಡಿ, ಚಿಕ್ಕಬಳ್ಳಾಪುರ-ಪುಟ್ಟಪರ್ತಿ ಮತ್ತು ಶ್ರೀನಿವಾಸಪುರ-ಮದನಪಲ್ಲಿ ಮಾರ್ಗಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಪ್ರಸ್ತಾವವು ಯೋಜನಾ ಆಯೋಗದ ಒಪ್ಪಿಗೆಗೆ ಹೋಗಿದೆ.

ಇದು ಈ ಭಾಗದ ಜನರ ಬಹುದಿನಗಳ ಕನಸು. ಹಾವೇರಿ- ಶಿರಸಿ, ಶಿವಮೊಗ್ಗ- ಶಿಕಾರಿಪುರ, ಮಧುಗಿರಿ- ಗೌರಿಬಿದನೂರು, ದಾಂಡೇಲಿಯನ್ನು ಹುಬ್ಬಳ್ಳಿ- ಅಂಕೋಲಾ ಮಾರ್ಗಕ್ಕೆ ಸೇರಿಸುವ ರೈಲು ಮಾರ್ಗಗಳ ಸಮೀಕ್ಷೆ ಕಾರ್ಯವನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಹದಿನಾಲ್ಕು ಯೋಜನೆಗಳನ್ನು ರಾಜ್ಯದ ಸಹಕಾರದೊಂದಿಗೆ ಕಾರ್ಯಗತಗೊಳಿಸಲಾಗುತ್ತಿದ್ದು, ಬೆಂಗಳೂರು- ಹುಬ್ಬಳ್ಳಿ, ಶಿವಮೊಗ್ಗ- ತಾಳಗುಪ್ಪ, ಕೊಟ್ಟುರು- ಹರಿಹರ (ಹರಪನಹಳ್ಳಿ ಮಾರ್ಗ), ಹಾಸನ- ಬೆಂಗಳೂರು (ಶ್ರವಣಬೆಳಗೊಳ ಮಾರ್ಗ), ಕಡೂರು- ಚಿಕ್ಕಮಗಳೂರು- ಸಕಲೇಶಪುರ, ಮುನಿರಾಬಾದ್- ಮೆಹಬೂಬ್‌ನಗರ, ಗುಲ್ಬರ್ಗಾ- ಬೀದರ್, ಕೋಲಾರ- ಚಿಕ್ಕಬಳ್ಳಾಪುರ, ಅರಸೀಕೆರೆ- ಬೀರೂರು (ಜೋಡಿ ಮಾರ್ಗ), ರಾಮನಗರ- ಮೈಸೂರು, ಬಾಗಲಕೋಟೆ- ಕುಡಚಿ, ರಾಯದುರ್ಗ-ತುಮಕೂರು (ಕಲ್ಯಾಣದುರ್ಗ ಮಾರ್ಗ),ತುಮಕೂರು- ಚಿತ್ರದುರ್ಗ- ದಾವಣಗೆರೆ, ಶಿವಮೊಗ್ಗ- ಹರಿಹರ ಹಾಗೂ ವೈಟ್‌ಫೀಲ್ಡ್- ಕೋಲಾರ ಮಾರ್ಗಗಳು ಸೇರಿವೆ. ತುಮಕೂರು- ದಾವಣಗೆರೆ ಹಾಗೂ ಶಿವಮೊಗ್ಗ- ಹರಿಹರ ರೈಲು ಮಾರ್ಗ ಕಾರ್ಯಗತವಾದರೆ ಮಧ್ಯ ಕರ್ನಾಟಕದಲ್ಲಿ `ಸಾರಿಗೆ ಕ್ರಾಂತಿ~ಯೇ ಆಗಲಿದೆ.

ರಾಯಚೂರು-ಪಾಂಡುರಂಗಸ್ವಾಮಿ, ಹುಮ್ನಾಬಾದ್-ಹಳ್ಳಿಖೇಡ್, ಸಕ್ರಾಯಪಟ್ಟಣ-ಕಣಿವೆಹಳ್ಳಿ, ಕಣಿವೆಹಳ್ಳಿ-ಚಿಕ್ಕಮಗಳೂರು ಮಾರ್ಗಗಳ ಕಾರ್ಯ ಈ ವರ್ಷ ಪೂರ್ಣಗೊಳ್ಳಲಿದೆ. ಗುಲ್ಬರ್ಗಾ- ಸುಲ್ತಾನಪುರ, ರಾಯಚೂರು- ಗಡ್ವಾಲ್, ಹಿರಿಸಾವೆ- ಶ್ರವಣಬೆಳಗೋಳ, ಮಾರ್ಗಗಳ ಕೆಲಸ ಬರುವ ವರ್ಷ ಮುಗಿಯಲಿದೆ. ಪ್ರಸಕ್ತ ಬಜೆಟ್‌ನಲ್ಲಿ 11 ಹೊಸ ರೈಲು ಮಾರ್ಗ  ಯೋಜನೆಗಳನ್ನು ಪ್ರಕಟಿಸಲಾಗಿದ್ದು ಕರ್ನಾಟಕದ ಒಂದೂ ಮಾರ್ಗವೂ ಸೇರಿಲ್ಲ.

ಈ ವರ್ಷ ಪೂರ್ಣಗೊಳ್ಳಲಿರುವ 19 ಮಾರ್ಗಗಳ ಗೇಜ್ ಪರಿವರ್ತನೆಯಲ್ಲಿ ಕೋಲಾರ- ಚಿಂತಾಮಣಿ, ಚಿಕ್ಕಬಳ್ಳಾಪುರ- ಶಿಡ್ಲಘಟ್ಟ, ಮುಂದಿನ ವರ್ಷ ಮುಗಿಯಲಿರುವ  ಹದಿನೇಳು ಮಾರ್ಗಗಳ ಗೇಜ್ ಪರಿವರ್ತನೆಯಲ್ಲಿ ಚಿಂತಾಮಣಿ- ಶಿಡ್ಲಘಟ್ಟ ಸೇರಿವೆ. ಬೆಂಗಳೂರು- ಮೈಸೂರು ಜೋಡಿ ಮಾರ್ಗದಲ್ಲಿ ರಾಮನಗರ- ಚನ್ನಪಟ್ಟಣ, ಮದ್ದೂರು- ಹನಕೆರೆ, ಮೈಸೂರು- ನಾಗನಹಳ್ಳಿ ಹಾಗೂ ಬಳ್ಳೇಕೆರೆ- ಬೀರೂರು, ಬೀರೂರು- ಅಜ್ಜಂಪುರ ನಡುವಿನ ಮಾರ್ಗಗಳು ಪ್ರಸಕ್ತ ವರ್ಷ, ಹನಕೆರೆ- ಮಂಡ್ಯ, ಮಂಡ್ಯ- ಯಲಿಯೂರು, ನಾಗವಂಗಲ- ಅಜ್ಜಂಪುರ ಹಾಗೂ ಅಜ್ಜಂಪುರ- ಶಿವಾನಿ ನಡುವಿನ ಕಾಮಗಾರಿ ಮುಂದಿನ ವರ್ಷ ಮುಗಿಯಲಿದೆ ಎಂದು ರೈಲ್ವೆ ಸಚಿವರು ಪ್ರಕಟಿಸಿದರು.

ಗದಗ- ಸೋಲಾಪುರ ನಡುವಿನ ಜೋಡಿ ರೈಲು ಮಾರ್ಗಕ್ಕೆ ಸಮೀಕ್ಷೆ ಕಾರ್ಯ ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ. ಹೊಸಪೇಟೆ- ಗುಂತಕಲ್, ತೋರಣಗಲ್- ರಣಜಿತ್‌ಪುರ ಮಾರ್ಗಗಳ ವಿದ್ಯುದೀಕರಣ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಹೊಸಪೇಟೆ-ಗದಗ-ಹುಬ್ಬಳ್ಳಿ, ಮೈಸೂರು- ಹಾಸನ- ಮಂಗಳೂರು (ಹಾಸನ- ಅರಸೀಕೆರೆ ಸೇರಿ), ಬೆಂಗಳೂರು-ತುಮಕೂರು-  ಹುಬ್ಬಳ್ಳಿ- ಲೋಂಡಾ- ವಾಸ್ಕೊ (ಬೀರೂರು- ತಾಳಗುಪ್ಪ ಸೇರಿ), ಚಿಕ್ಕಜಾಜೂರು- ಬಳ್ಳಾರಿ ಮಾರ್ಗಗಳ ವಿದ್ಯುದೀಕರಣದ ಸರ್ವೆ ಕಾರ್ಯಕ್ಕೆ ಮಂಜೂರಾತಿ ನೀಡಲಾಗಿದೆ.

ರೈಲುಗಳ ವಿಸ್ತರಣೆ: ಬೆಂಗಳೂರು- ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲನ್ನು ತಾಳಗುಪ್ಪದವರೆಗೆ, ಪಾಲಕ್ಕಾಡ್- ಮಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಕೊಯಮತ್ತೂರುವರೆಗೆ, ಮಂಗಳೂರು- ತಿರುವನಂತಪುರ ಎಕ್ಸ್‌ಪ್ರೆಸ್ ಅನ್ನು ನಾಗರಕೊಯಿಲ್‌ವರೆಗೆ, ದಾದರ್- ಯಶವಂತಪುರ ಎಕ್ಸ್‌ಪ್ರೆಸ್ ರೈಲನ್ನು ಪುದುಚೇರಿವರೆಗೆ, ಬೆಂಗಳೂರು- ಬಂಗಾರಪೇಟೆ ಪ್ಯಾಸೆಂಜರ್ ರೈಲನ್ನು ಮಾರಿಕುಪ್ಪಂವರಗೆ ಹಾಗೂ ಬೆಂಗಳೂರು- ಕೆ.ಆರ್.ಪುರ ಪ್ಯಾಸೆಂಜರ್ ರೈಲನ್ನು ಮಾರಿಕುಪ್ಪಂವರೆಗೆ ವಿಸ್ತರಿಸಲಾಗುತ್ತಿದೆ.

ರೈಲುಗಳ ಓಡಾಟ ಹೆಚ್ಚಳ:

ಚೆನ್ನೈ- ಮಂಗಳೂರು ಎಕ್ಸ್‌ಪ್ರೆಸ್ (ಪ್ರತಿದಿನ), ಯಶವಂತಪುರ- ಸೊಲ್ಲಾಪುರ ಎಕ್ಸ್‌ಪ್ರೆಸ್ (ಪ್ರತಿದಿನ), ಬೆಂಗಳೂರು- ಕೋಚುವೇಲಿ (ಪ್ರತಿದಿನ), ಮೈಸೂರು- ಬೆಂಗಳೂರು ಪ್ಯಾಸೆಂಜರ್ (ಪ್ರತಿದಿನ). ಬೆಂಗಳೂರು- ಅರಸೀಕೆರೆ ಪ್ಯಾಸೆಂಜರ್ (ಪ್ರತಿದಿನ) ಬೆಂಗಳೂರು- ಹಿಂದುಪುರ ಪ್ಯಾಸೆಂಜರ್ (ಪ್ರತಿದಿನ) ರೈಲನ್ನು ಓಡಿಸಲಾಗುವುದು ಎಂದು ರೈಲ್ವೆ ಸಚಿವರು ಪ್ರಕಟಿಸಿದರು.

ಬಜೆಟ್ ಮಂಡನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ರಾಜ್ಯದ ಜನ ಮತ್ತು ಜನಪ್ರತಿನಿಧಿಗಳ ಬಹುತೇಕ ಬೇಡಿಕೆಗಳಿಗೆ ಸ್ಪಂದಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.