ADVERTISEMENT

ರಾಜ್ಯಕ್ಕೆ ಬರಲಿದೆ ಹೈಬ್ರಿಡ್ ತೆಂಗು!

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 20:00 IST
Last Updated 4 ಸೆಪ್ಟೆಂಬರ್ 2013, 20:00 IST

ಬೆಂಗಳೂರು: ಬಂಪರ್ ಬೆಳೆ ನೀಡುವ ಹೈಬ್ರಿಡ್ ತೆಂಗಿನ ತಳಿ ಈಗ ರಾಜ್ಯಕ್ಕೂ ಬರಲಿದೆ. ಹೈಬ್ರಿಡ್ ತೆಂಗು ಪ್ರತಿ ಹೆಕ್ಟೇರ್‌ಗೆ ಸರಾಸರಿ 14 ಸಾವಿರ ಕಾಯಿಗಳನ್ನು ನೀಡುತ್ತದೆ. ಈ ತಳಿಯನ್ನು ರಾಜ್ಯದಲ್ಲಿ ಜನಪ್ರಿಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ತಮಿಳುನಾಡಿನ ಕೊಯಮತ್ತೂರು ಇಡೀ ವಿಶ್ವದಲ್ಲೇ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆ. ಅಲ್ಲಿ ಅತ್ಯುತ್ತಮ ಹೈಬ್ರಿಡ್ ತಳಿ ಇದೆ. ಕೊಯಮತ್ತೂರಿನ ತೋಟವೊಂದರಲ್ಲಿ ಪ್ರತಿ ಹೆಕ್ಟೇರ್‌ಗೆ 30 ಸಾವಿರ ತೆಂಗಿನ ಕಾಯಿ ಬೆಳೆದಿರುವ ಉದಾಹರಣೆಯೂ ಇದೆ. ರಾಜ್ಯದಲ್ಲಿ ಇಂತಹ ತೆಂಗು ತಳಿ ಇಲ್ಲ. ಇಲ್ಲಿರುವ ತೆಂಗಿನ ಮರಗಳು ಹೆಕ್ಟೇರ್‌ಗೆ ಸರಾಸರಿ 7 ಸಾವಿರ ಕಾಯಿ ನೀಡುತ್ತವೆ. ಇಲ್ಲಿಯೂ ತೆಂಗು ಬೆಳೆಗೆ ಪುನಶ್ಚೇತನ ನೀಡಲು ಹೈಬ್ರಿಡ್ ಮೊರೆ ಹೋಗುವುದು ಅನಿವಾರ್ಯ ಎಂದು ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ ಅಭಿಪ್ರಾಯಪಡುತ್ತಾರೆ.

ರಾಜ್ಯದಲ್ಲಿ ಮಳೆ ಇಲ್ಲದ ಕಾರಣ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಹಾಳಾಗಿದೆ. ಕೆಲವು ಕಡೆ ಹಾಳಾಗುವ ಹಂತದಲ್ಲಿದೆ. ಒಟ್ಟಾರೆ ಈ ಬೆಳೆಯನ್ನು ಮತ್ತೆ ಅಭಿವೃದ್ಧಿಪಡಿಸಲು ರೂ. 330 ಕೋಟಿ ವೆಚ್ಚದ ಪ್ಯಾಕೇಜ್ ರೂಪಿಸಿದ್ದು, ಅದರಡಿ ಹೈಬ್ರಿಡ್ ತಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

`ಈ ಯೋಜನೆಯಡಿ ರೈತರಿಗೆ ತೆಂಗಿನ ಸಸಿ ನೀಡುವುದರ ಜತೆಗೆ ಮೂರು ವರ್ಷಗಳ ಕಾಲ ಅದನ್ನು ಪೋಷಿಸಲು ಸರ್ಕಾರ ನೆರವಾಗಲಿದೆ. ಒಂದು ಹೆಕ್ಟೇರ್‌ಗೆ 25 ಸಾವಿರ ರೂಪಾಯಿವರೆಗೂ ನೆರವು ನೀಡಲಾಗುವುದು. ಕೊಯಮತ್ತೂರಿನ ಹೈಬ್ರಿಡ್ ತಳಿ ಮೂರು ವರ್ಷಕ್ಕೇ ಕಾಯಿ ಬಿಡಲು ಆರಂಭಿಸುತ್ತದೆ. ಆದರೆ, ಅದರ ಜೀವಿತಾವಧಿ, ನಾಟಿ ತೆಂಗಿನ ಮರಗಳ ಹಾಗೆ ಇರುವುದಿಲ್ಲ. 35 ವರ್ಷಕ್ಕೇ ಹೈಬ್ರಿಡ್ ಮರ ಸತ್ತು ಹೋಗುತ್ತದೆ. ಆ ವೇಳೆಗೆ ನಾಟಿ ಮರಕ್ಕಿಂತ ಹೆಚ್ಚು ತೆಂಗಿನ ಕಾಯಿ ಅದು ಕೊಟ್ಟಿರುತ್ತದೆ' ಎಂದರು.

`ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿಗೆ ಈ ಪ್ಯಾಕೇಜ್‌ನ ವಿವರಗಳನ್ನು ಸಲ್ಲಿಸಲಾಗುವುದು. ಸಚಿವ ಸಂಪುಟ ಒಪ್ಪಿಗೆ ಕೊಟ್ಟ ನಂತರ ಅದನ್ನು ಜಾರಿ ಮಾಡಲಾಗುವುದು.ರೂ. 330 ಕೋಟಿಯಲ್ಲಿ ಕೇಂದ್ರ ಸರ್ಕಾರ ಶೇ 50ರಷ್ಟು ಹಣ ನೀಡುವ ವಿಶ್ವಾಸ ಇದೆ. ಅದಕ್ಕೆ ಪೂರಕವಾಗಿಯೇ ಪ್ಯಾಕೇಜ್ ಸಿದ್ಧಪಡಿಸಲಾಗಿದೆ' ಎಂದು ಹೇಳಿದರು.

`ತಮಿಳುನಾಡಿನ ಪೊಲ್ಲಾಚ್ಚಿ ಒಂದರಲ್ಲೇ ವಾರ್ಷಿಕ ರೂ. 1,000 ಕೋಟಿ ಮೊತ್ತದ ತೆಂಗು ರಫ್ತಾಗುತ್ತದೆ. ಹೀಗಾಗಿ ಇದೇ ರೀತಿಯ ಹೈಬ್ರಿಡ್ ತಳಿಯನ್ನು ರಾಜ್ಯದಲ್ಲಿ ಅಭಿವೃದ್ಧಿಪಡಿಸಲಾಗುವುದು. ಹೆಕ್ಟೇರ್‌ಗೆ ರಾಜ್ಯದಲ್ಲಿ 100 ಸಸಿ ನೆಟ್ಟರೆ, ತಮಿಳುನಾಡಿನಲ್ಲಿ 170 ಸಸಿ ನೆಡುತ್ತಿದ್ದಾರೆ. ಸಸಿಗಳ ನಡುವಿನ ಅಂತರ ತಮಿಳುನಾಡಿನಲ್ಲಿ ಕಡಿಮೆ ಇದ್ದರೂ ಇಳುವರಿ ಮಾತ್ರ ದುಪ್ಪಟ್ಟು' ಎಂದರು. ಮಳೆ ಇಲ್ಲದೆ ಒಣಗಿದ ತೆಂಗಿನ ಮರಗಳಿಂದ ಪೀಠೋಪಕರಣ ತಯಾರಿಸಬಹುದು. ಈ ಉದ್ಯಮಕ್ಕೆ ಉತ್ತೇಜನ ನೀಡಲು ಸರ್ಕಾರ ಉದ್ದೇಶಿಸಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.