ADVERTISEMENT

ರಾಜ್ಯದಲ್ಲಿ ಅತಿಹೆಚ್ಚು ಪೌಷ್ಟಿಕಾಂಶ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST
ರಾಜ್ಯದಲ್ಲಿ ಅತಿಹೆಚ್ಚು ಪೌಷ್ಟಿಕಾಂಶ ಸಮಸ್ಯೆ
ರಾಜ್ಯದಲ್ಲಿ ಅತಿಹೆಚ್ಚು ಪೌಷ್ಟಿಕಾಂಶ ಸಮಸ್ಯೆ   

ನವದೆಹಲಿ: ರಕ್ತದಲ್ಲಿ ಅಧಿಕ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರಾಯ್ಡ್‌ ಮಟ್ಟ, ಧೂಮಪಾನ ಹಾಗೂ ಮದ್ಯಪಾನದಿಂದ ಕರ್ನಾಟಕದ ನಗರ ಪ್ರದೇಶದ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ಸಮೀಕ್ಷೆಯೊಂದು ತಿಳಿಸಿದೆ.

ಕರ್ನಾಟಕದ ನಗರ ಪ್ರದೇಶದ ಪುರುಷ ಮತ್ತು ಮಹಿಳೆಯರಲ್ಲಿನ ಕೊಲೆಸ್ಟರಾಲ್‌ ಮಟ್ಟ ಇಡೀ ದೇಶದಲ್ಲೇ ಎರಡನೇ ಅತಿ ಹೆಚ್ಚಿನದಾಗಿದೆ ಎಂಬುದು ಹೈದರಾಬಾದ್‌ನ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್‌ಐಎನ್‌) ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಎನ್ಐಎನ್‌, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧೀನದ ಪ್ರಮುಖ ಸಂಸ್ಥೆಯಾಗಿದೆ.

ಸಮೀಕ್ಷೆ ನಡೆಸಿದ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರ್ನಾಟಕವೂ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಎಲ್‌ಡಿಎಲ್‌ ಕೊಲೆಸ್ಟರಾಲ್‌ (ಕೆಟ್ಟ ಕೊಲೆಸ್ಟರಾಲ್‌) ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ.

ADVERTISEMENT

ಕರ್ನಾಟಕದ ನಗರ ಪ್ರದೇಶದ ಪುರುಷ ಮತ್ತು ಮಹಿಳೆಯರಲ್ಲಿ ಕೆಟ್ಟ ಮಟ್ಟದ ಟ್ರೈಗ್ಲಿಸರಾಯ್ಡ್‌ ಇದ್ದು, ಇದು ಹೃದಯದ ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳಿಗೆ ಕಾರಣವಾಗಿದೆ.

ನಗರ ಜೀವನದ ಒತ್ತಡ ಮಕ್ಕಳ ಮೇಲೂ ಇದೆ. ಕರ್ನಾಟಕದಲ್ಲಿನ ನಗರ ಪ್ರದೇಶದ ಶೇ 97ರಷ್ಟು ತಾಯಂದಿರು ಮಕ್ಕಳಿಗೆ ಆರು ತಿಂಗಳೊಳಗೆ ಪೂರಕ ಆಹಾರ ನೀಡುತ್ತಾರೆ. ಆರು ತಿಂಗಳೊಳಗೆ ಕೇವಲ ತಾಯಿ ಎದೆಹಾಲನ್ನು ನೀಡಬೇಕು ಎಂಬ ವೈದ್ಯರ ಸಲಹೆಯನ್ನು ತಾಯಂದಿರು ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದ ಮಕ್ಕಳಿಗೆ ಅತಿಸಾರದಂತಹ ಸೋಂಕು ಹೆಚ್ಚುತ್ತಿದೆ. ಅಲ್ಲದೆ ಮಕ್ಕಳ ತೂಕ ಇಳಿಕೆ ಹಾಗೂ ಅಪೌಷ್ಟಿಕತೆಗೂ ಕಾರಣವಾಗುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.

**

ಎನ್ಐಎ ಸಲಹೆ

* ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಕಾರಣ, ಪರಿಣಾಮದ ಸೂಕ್ಷ್ಮ ತಿಳಿಸಬೇಕು

* ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಗಳ ಪ್ರಯೋಜನದ ಬಗ್ಗೆ ಶಿಕ್ಷಣ ಅಗತ್ಯ

**

1.72 ಲಕ್ಷ: ಜನರಿಂದ ಮಾಹಿತಿ ಸಂಗ್ರಹ

52 ಸಾವಿರ: ಸಮೀಕ್ಷೆ ಮಾಡಲಾದ ಮನೆಗಳ ಸಂಖ್ಯೆ

16: ರಾಜ್ಯಗಳಲ್ಲಿ ಎನ್ಐಎಯಿಂದ ಮಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.