ನವದೆಹಲಿ (ಏಜೆನ್ಸೀಸ್): ಕಾಶ್ಮೀರದಲ್ಲಿ ಮುಂದುವರಿದಿರುವ ಹಿಂಸಾಚಾರದ ವಿಚಾರ ಬುಧವಾರ ಮತ್ತೊಮ್ಮೆ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದೆ.
ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈವರೆಗೆ ‘ಮೌನ’ ವಹಿಸಿ ಸಂಸತ್ತಿನ ಹೊರಗೆ ಮಾತನಾಡುತ್ತಿದ್ದಾರೆಂದು ಜರೆದಿರುವ ಪ್ರತಿಪಕ್ಷಗಳು, ಕಾಶ್ಮೀರಕ್ಕೆ ಸರ್ವಪಕ್ಷ ನಿಯೋಗ ತೆರಳುವುದು ಅತ್ಯಗತ್ಯ ಎಂದಿವೆ.
‘ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕು’
ಮಧ್ಯಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಶ್ಮೀರ ಹಿಂಸಾಚಾರ ವಿಷಯ ಪ್ರಸ್ತಾಪಿಸಿ ಮಾತನಾಡಿದ ಮೋದಿ, ‘ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕು. ಮಾನವೀಯತೆಯ ನೆಲೆಯ ಮೇಲೆ ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಳ್ಳಬೇಕು’ ಎಂದಿದ್ದರು.
‘ಸದನದಲ್ಲಿ ಚರ್ಚೆಯಾಗಲಿ’
ಮೋದಿ ಅವರ ಮಾತಿಗೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಗುಲಾಂ ನಭಿ ಆಜಾದ್, ‘ಮೋದಿ ಅವರು ಕಾಶ್ಮೀರ ವಿಚಾರವನ್ನು ಮಧ್ಯಪ್ರದೇಶದಲ್ಲಿ ಮಾತನಾಡುತ್ತಾರೆ. ದಲಿತರ ಮೇಲಿನ ಹಲ್ಲೆ ಹಾಗೂ ಕಾಶ್ಮೀರ ಹಿಂಸಾಚಾರದಂಥ ವಿಷಯಗಳು ಸದನದಲ್ಲಿ ಚರ್ಚೆಯಾಗಬೇಕು’ ಎಂದಿದ್ದಾರೆ.
‘ತಾಜ್ ಉರಿದರೂ ಕೇಂದ್ರಕ್ಕೆ ಬಿಸಿ ತಟ್ಟುವುದಿಲ್ಲ’
‘ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಮೋದಿ ಟ್ವೀಟ್ ಮಾಡುತ್ತಾರೆ. ಆದರೆ, ಕಾಶ್ಮೀರ ವಿಷಯದ ಬಗ್ಗೆ ಮೌನ ವಹಿಸುತ್ತಾರೆ. ಆಫ್ರಿಕಾದಲ್ಲಿ ಏನಾದರೂ ನಡೆದರೆ ಮೋದಿ ತಕ್ಷಣ ಟ್ವೀಟ್ ಮಾಡುತ್ತಾರೆ. ಆದರೆ, ಭಾರತದ ತಾಜ್ ಹೊತ್ತಿ ಉರಿದರೂ ಅದರ ಬಿಸಿ ಕೇಂದ್ರ ಸರ್ಕಾರಕ್ಕೆ ತಟ್ಟುವುದಿಲ್ಲ’ ಎಂದು ಆಜಾದ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.