ADVERTISEMENT

ರಾವಲ್ ಹೇಳಿಕೆಯಿಂದ ಸರ್ಕಾರ ದೂರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:30 IST
Last Updated 21 ಏಪ್ರಿಲ್ 2012, 19:30 IST

ಚೆನ್ನೈ/ ತಿರುವನಂತಪುರ (ಪಿಟಿಐ): ಕಳೆದ ಫೆಬ್ರುವರಿಯಲ್ಲಿ ಇಟಲಿಯ ನೌಕಾ ಸಿಬ್ಬಂದಿ ಭಾರತೀಯ ಮೀನುಗಾರರಿಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣವು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇರಳದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಹರೇನ್ ರಾವಲ್ ಅವರು ಸುಪ್ರೀಂಕೋರ್ಟ್‌ನಲ್ಲಿ ನೀಡಿದ ಹೇಳಿಕೆಗಾಗಿ ಕೇಂದ್ರದ ಯುಪಿಎ ಸರ್ಕಾರ ತೀವ್ರ ವಾಗ್ದಾಳಿಗೆ ಗುರಿಯಾಗಿದೆ.

ಈ ಹಿನ್ನೆಲೆಯಲ್ಲಿ ರಾವಲ್ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿರುವ ಸರ್ಕಾರ, ಘಟನೆ ನಡೆದದ್ದು ಭಾರತದ ಜಲ ಪ್ರದೇಶದಲ್ಲೇ ಎಂದು ಹೇಳಿದೆ. `ಅದು ರಾವಲ್ ಅವರ ವೈಯಕ್ತಿಕ ಹೇಳಿಕೆ ಇರಬಹುದು~ ಎಂದು ಹಡಗು ಸಚಿವ ಜಿ.ಕೆ.ವಾಸನ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

`ಇಟಲಿಯ ಎನ್ರಿಕಾ ಲೆಕ್ಸಿ ಹಡಗು ಈ ಪ್ರಕರಣ ನಡೆದಾಗ ಅಂತರ ರಾಷ್ಟ್ರೀಯ ಜಲಪ್ರದೇಶದಲ್ಲಿ ಇತ್ತು. ಆದ ಕಾರಣ ಈ ಪ್ರಕರಣವನ್ನು ವಿಚಾರಣೆಗೊಳಪಡಿಸುವ ಅಧಿಕಾರ ಭಾರತ ಸರ್ಕಾರಕ್ಕೆ ಇಲ್ಲ ಎಂದು ಇಟಲಿ ಹೇಳಿತ್ತು. ಇದೀಗ ಎಎಸ್‌ಜಿ ಅವರೂ ಇದನ್ನೇ ಅನುಮೋದಿಸಿದಂತಾಗಿದೆ~ ಎಂದು ಕೆಲವರು ಟೀಕಿಸಿದ್ದಾರೆ.

ಚಾಂಡಿ ಆಗ್ರಹ:  ರಾವಲ್ ಅವರನ್ನು ಈ ಪ್ರಕರಣದಿಂದ ತೆಗೆದುಹಾಕಿ ಬೇರೆಯವರನ್ನು ನೇಮಕ ಮಾಡುವಂತೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕೇಂದ್ರವನ್ನು ಆಗ್ರಹಿಸಿದ್ದಾರೆ.

ಪ್ರಕರಣವನ್ನು ಅಟಾರ್ನಿ ಜನರಲ್ ಅವರಿಗೆ ವಹಿಸಬೇಕು ಮತ್ತು ರಾವಲ್  ಹೇಳಿಕೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಚಾಂಡಿ, ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.