ADVERTISEMENT

ರಾಷ್ಟ್ರಪತಿ ಚುನಾವಣೆ: ಸಂಗ್ಮಾ ಸ್ಪರ್ಧೆ ತಳ್ಳಿಹಾಕಿದ ಎನ್‌ಸಿಪಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಲೋಕಸಭೆಯ ಮಾಜಿ ಸ್ಪೀಕರ್ ಹಾಗೂ ಎನ್‌ಸಿಪಿ ನಾಯಕ ಪಿ.ಎ.ಸಂಗ್ಮಾ ಅವರನ್ನು ಕಣಕ್ಕಿಳಿಸುವ ಮಾಧ್ಯಮ ವರದಿಗಳನ್ನು ಕೇಂದ್ರ ಸಚಿವ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಸ್ಪಷ್ಟವಾಗಿ ತಳ್ಳಿಹಾಕಿದೆ.

`ಸಂಗ್ಮಾ ಅವರಿಗೆ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವ ಇಂಗಿತ ಇರಬಹುದು. ಆದರೆ, ಇಲ್ಲಿಯವರೆಗೆ ಈ ವಿಷಯ ಪಕ್ಷದ ವೇದಿಕೆ ಅಥವಾ ಸಭೆಯಲ್ಲಿ ಚರ್ಚೆಗೆ ಬಂದಿಲ್ಲ~ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ತಾರಿಖ್ ಅನ್ವರ್ ಸ್ಪಷ್ಟಪಡಿಸಿದ್ದಾರೆ. ಇದೇ 25ರಂದು ನಡೆಯಲಿರುವ ಕಾರ್ಯಕಾರಿಣಿಯಲ್ಲಿ ಈ ವಿಷಯ ಚರ್ಚೆಗೆ ಬರಲೂಬಹುದು ಎಂದು ಅವರು ಹೇಳಿದ್ದಾರೆ.

ಎನ್‌ಸಿಪಿಯು ಆಡಳಿತಾರೂಢ ಯುಪಿಎ ಮೈತ್ರಿಕೂಟದ ಅಂಗಪಕ್ಷವಾಗಿರುವ ಕಾರಣ, ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಯುಪಿಎ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಿದ್ದು ಅದಕ್ಕೆ ತಮ್ಮ ಪಕ್ಷ ಬದ್ಧವಾಗಿರುತ್ತದೆ ಎಂದಿದ್ದಾರೆ.

ರಾಷ್ಟ್ರಪತಿ ಹುದ್ದೆಗೆ ತಮ್ಮ ಅಭ್ಯರ್ಥಿಯ ಆಯ್ಕೆಗೆ ಯುಪಿಎ ಮತ್ತು ಎನ್‌ಡಿಎ ಮೈತ್ರಿಕೂಟಗಳು ಅಗತ್ಯ ಸಂಖ್ಯಾ ಬಲದ ಕೊರತೆ ಎದುರಿಸುತ್ತಿವೆ. ಹೀಗಾಗಿ ಒಮ್ಮತದ ಅಭ್ಯರ್ಥಿ ಆಯ್ಕೆ ಸಾಧ್ಯತೆ ಇದ್ದು, ಎನ್‌ಸಿಪಿಯು ಸಂಗ್ಮಾ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಇದಕ್ಕಾಗಿ ಬೆಂಬಲ ಕೋರಿ ಎನ್‌ಡಿಎ ಬಳಿ ಸಂಧಾನಕಾರರನ್ನು ಕಳುಹಿಸಿದ್ದು, ಈ ಪ್ರಸ್ತಾವಕ್ಕೆ ಅದು ಸಮ್ಮತಿ ಸೂಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಈ ವರದಿಗಳನ್ನು ಬಲವಾಗಿ ಅಲ್ಲಗಳೆದಿರುವ ಅನ್ವರ್, ಇದು ಕಾರ್ಯರೂಪಕ್ಕೆ ಬರಲು ಸಾಧ್ಯವಿಲ್ಲದ ವಿಚಾರ, ಸಂಗ್ಮಾ ಎರಡೂ ಮೈತ್ರಿಕೂಟಗಳ ಒಮ್ಮತದ ಅಭ್ಯರ್ಥಿಯಾದಲ್ಲಿ ಮಾತ್ರ ಇದು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಯುಪಿಎಯಿಂದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅಥವಾ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ಹೆಸರು ಈ ಹುದ್ದೆಗೆ ಕೇಳಿಬರುತ್ತಿದೆ. ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಯುಪಿಎ ಜಾತ್ಯತೀತ ಶಕ್ತಿಗಳ ಜತೆ ಕೈಜೋಡಿಸಲಿದೆ ಎಂಬ ಸ್ಪಷ್ಟ ಸಂದೇಶ ಕಳುಹಿಸಿದೆ.

ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಹುದ್ದೆಗಳ ವಿಷಯದಲ್ಲಿ ಯುಪಿಎ, ಎನ್‌ಡಿಎ ಜತೆ `ಕೊಡುಕೊಳ್ಳುವಿಕೆ~ ಚೌಕಾಶಿಗೂ ಇಳಿಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

ಯುಪಿಎ ಮೈತ್ರಿಕೂಟದಲ್ಲಿ ಬಲಾಢ್ಯರಾಗಿರುವ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರು ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ. ಈ ವಾಸ್ತವದ ಅರಿವಿರುವ ಕಾಂಗ್ರೆಸ್, ಎಡ ಪಕ್ಷಗಳ ಜತೆ ಕೈಜೋಡಿಸುವ ಚಿಂತನೆ ನಡೆಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

     
   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT