ADVERTISEMENT

ರಾಹುಲ್ ವಿರುದ್ಧ ಆರೋಪ: ಮಾಜಿ ಶಾಸಕನಿಗೆ ದಂಡ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 16:30 IST
Last Updated 7 ಮಾರ್ಚ್ 2011, 16:30 IST

ಲಖನೌ (ಪಿಟಿಐ): ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಓರ್ವ ಯುವತಿ ಹಾಗೂ ಆಕೆಯ ಹೆತ್ತವರನ್ನು ಅಪಹರಿಸಿ ತನ್ನ ವಶದಲ್ಲಿರಿಸಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದ  ಸಮಾಜವಾದಿ ಪಕ್ಷದ ಮಾಜಿ ಶಾಸಕರೊಬ್ಬರಿಗೆ  ಅಲಹಾಬಾದ್ ಹೈಕೋರ್ಟ್ 50 ಲಕ್ಷ ರೂ ದಂಡ ವಿಧಿಸಿದೆ.

ಇಷ್ಟೇ ಅಲ್ಲದೆ, ರಾಹುಲ್ ಗಾಂಧಿ ವಿರುದ್ಧ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ಕಿಶೋರ್ ಸಾಮ್ರಾಟ್ ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ಉಮಾನಾಥ ಸಿಂಗ್ ಮತ್ತು ಸತೀಶ್‌ಚಂದ್ರ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.
ರಾಹುಲ್ ಗಾಂಧಿ ವಶದಲ್ಲಿರಿಸಿದ್ದಾರೆನ್ನಲಾದ ಯುವತಿ ಸುಕನ್ಯಾಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತಲ್ಲದೆ ವಿಚಾರಣೆಯ ವೇಳೆ ಆಕೆ ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಳು.

ಸುಕನ್ಯಾಳನ್ನು ಅಪಹರಿಸಲಾಗಿದೆ ಎಂದು ವರದಿ ಪ್ರಕಟಿಸಿದ ವೆಬ್‌ಸೈಟ್ ವಿರುದ್ಧ ತನಿಖೆ ನಡೆಸಲೂ ನ್ಯಾಯಾಲಯ ಇದೇ ವೇಳೆ ಆದೇಶ ನೀಡಿದೆ.

ಸುಕನ್ಯಾಳ ಸಂಬಂಧಿ ಎಂದು ಹೇಳಿಕೊಂಡು ಗಜೇಂದ್ರ ಪಾಲ್ ಎಂಬುವವರು ಕೂಡ ರಾಹುಲ್ ಗಾಂಧಿ ವಿರುದ್ಧ ಇದೇ ಆರೋಪ ಹೊರಿಸಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಯುವತಿ ಹಾಗೂ ಆಕೆಯ ಹೆತ್ತವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.