ADVERTISEMENT

ರೂ 7200 ಕೋಟಿ ಸಾಲ

ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST

ನವದೆಹಲಿ: ಕಬ್ಬು ಬೆಳೆಗಾರರ ಬಾಕಿ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ ₨7,200 ಕೋಟಿ ಬಡ್ಡಿ ರಹಿತ  ಸಾಲ ನೀಡಬೇಕು ಎಂದು  ಪ್ರಧಾನಿ ಮನ­ಮೋಹನ್‌ ಸಿಂಗ್‌ ಅವರು ರಚಿಸಿದ್ದ ಸಚಿವರ ಸಮಿತಿ ಶುಕ್ರವಾರ ಶಿಫಾರಸು ಮಾಡಿದೆ. ಕೇಂದ್ರ ಕೃಷಿ ಸಚಿವ ಶರದ್‌ ಪವಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಚಿವರ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

ಹಣಕಾಸು ಸಚಿವ ಪಿ. ಚಿದಂಬರಂ, ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯಿಲಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳ ಮುಖ್ಯಮಂತ್ರಿಗಳು  ಪಾಲ್ಗೊಂಡಿದ್ದರು. ದೇಶದಾದ್ಯಂತ ಸಕ್ಕರೆ ಕಾರ್ಖಾನೆ­ಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಕಬ್ಬು ಬೆಳೆಗಾರರಿಗೆ ರೂ 3,400 ಕೋಟಿ ಬಾಕಿ ಕೊಡಬೇಕಿದೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಕಬ್ಬಿಗೆ ಹೆಚ್ಚಿನ ಬೆಂಬಲ ಬೆಲೆ ನೀಡಲು ಆಗುವುದಿಲ್ಲ ಎಂದು ಹೇಳಿ ಅನೇಕ ಸಕ್ಕರೆ ಕಾರ್ಖಾನೆಗಳು ಕಬ್ಬು ಅರಿಯುತ್ತಿಲ್ಲ. ಇದರಿಂದ ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಪ್ರತಿಭಟನೆ ತಾರಕಕ್ಕೇರಿದೆ.

ರಿಸರ್ವ್‌ ಬ್ಯಾಂಕ್‌ ನಿಯಮಾವಳಿಗೆ ಅನುಗುಣವಾಗಿ ಸಕ್ಕರೆ ಕಾರ್ಖಾನೆಗಳ ಸಾಲ ಮರು ಹೊಂದಾಣಿಕೆಗೆ ಅವ­ಕಾಶ ಮಾಡಿಕೊಡಬೇಕು. 40 ಲಕ್ಷ ಟನ್‌ ಕಚ್ಚಾ ಸಕ್ಕರೆ ಉತ್ಪಾದನೆಗೆ ಪ್ರೋತ್ಸಾಹ ಧನ ನೀಡಬೇಕು ಮತ್ತು ಹೆಚ್ಚುವರಿ ದಾಸ್ತಾನು  (ಬಫರ್‌ ಸ್ಟಾಕ್‌) ಮಾಡಬೇಕು. ಇದಲ್ಲದೆ ಪೆಟ್ರೋಲ್‌ಗೆ ಈಥನಾಲ್‌ ಮಿಶ್ರಣ­ವನ್ನು ಶೇ 10ಕ್ಕೆ ಹೆಚ್ಚಿಸಬೇಕು ಎಂಬುದು ಸಚಿವರ ಸಮಿತಿ ಯ ಪ್ರಮುಖ ಶಿಫಾರಸು.

ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಪಡೆದ ಬಳಿಕ ಇದು ಜಾರಿಗೆ ಬರಲಿದೆ. ಹಣಕಾಸು ಸಂಸ್ಥೆಗಳ ಮೂಲಕ ಸಕ್ಕರೆ ಕಾರ್ಖಾನೆಗಳಿಗೆರೂ 7,200 ಕೋಟಿ ಸಾಲ ನೀಡಲಾಗುವುದು. ಬಳಿಕ ಸರ್ಕಾರವು ಸಕ್ಕರೆ ಕಾರ್ಖಾನೆ­ಗಳಿಂದ ಮೂರು ವರ್ಷಗಳಲ್ಲಿ ಅಬಕಾರಿ ತೆರಿಗೆ, ಸೆಸ್‌ ಮತ್ತು ಸರ್‌ಚಾರ್ಜ್ ಮೂಲಕ ಈ ಸಾಲದ ಮರುಪಾವತಿಗೆ ಅಗತ್ಯ ಹಣವನ್ನು  ಸಂಗ್ರಹಿಸಲಾಗುವುದು.

ಕಬ್ಬು ಬೆಳೆಗಾರರ ಬಾಕಿ ಪಾವತಿ­ಗಾಗಿಯೇ ಬಳಸಬೇಕೆಂಬ ಷರತ್ತಿನ ಮೇಲೆ  ಕಾರ್ಖಾನೆಗಳಿಗೆ   ಸಾಲ ನೀಡಲಾಗುವುದು. ಇದಕ್ಕೆ ಶೇಕಡಾ 12ರ ಬಡ್ಡಿ ವಿಧಿಸಲಾಗುವುದು. ಆದರೆ ಬಡ್ಡಿ ಮೊತ್ತದಲ್ಲಿ ಕೇಂದ್ರ ಸರ್ಕಾರ ಶೇ 5 ರಷ್ಟು ಮತ್ತು ಸಕ್ಕರೆ ಅಭಿವೃದ್ಧಿ ನಿಧಿ ಯಿಂದ ಶೇ 7ರಷ್ಟು ಭರಿಸಲಾಗು­ವುದು. ಕಾರ್ಖಾನೆಗಳು ಐದು ವರ್ಷ­ಗಳಲ್ಲಿ ಸಾಲ ಮರುಪಾವತಿ ಮಾಡ­ಬೇಕು. ಮರುಪಾವತಿ ಮೂರನೇ  ವರ್ಷದಿಂದ ಆರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT