ನವದೆಹಲಿ: ದೇಶದ ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) 2011–12ನೇ ಸಾಲಿನಲ್ಲಿ ವಿದೇಶಗಳಿಂದ ರೂ.11,546.29 ಕೋಟಿಗಳಷ್ಟು ಮೊತ್ತದ ದೇಣಿಗೆ ಸಂಗ್ರಹಿಸಿವೆ.
ನಿಧಿ ಸಂಗ್ರಹ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 5ನೇ ಕ್ರಮಾಂಕದಲ್ಲಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯೊಂದು ಹೇಳಿದೆ.
ದೇಶದಲ್ಲಿನ ‘ಎನ್‌ಜಿಒ’ಗಳು 2011–12ನೇ ಸಾಲಿನಲ್ಲಿ ಸಂಗ್ರಹಿಸಿದ ದೇಣಿಗೆಯ ಬಳಕೆ ಕುರಿತು ಗೃಹ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ಈ ವಿವರ ಇದೆ. ಸ್ವಯಂ ಸೇವಾ ಸಂಸ್ಥೆಗಳು ವಿದೇಶಿ ದೇಣಿಗೆಯ ಖರ್ಚುವೆಚ್ಚದ ಬಗ್ಗೆ ನಿಖರವಾದ ಲೆಕ್ಕಪತ್ರ ಇರಿಸದಿದ್ದರೆ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯಡಿ ಕಠಿಣ ಕ್ರಮಕ್ಕೆ ಗುರಿಯಾಗಬೇಕಾಗುತ್ತಿದೆ.
ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಗಂಭೀರ ಆರೋಪಕ್ಕೂ ಗುರಿಯಾಗಬೇಕಾಗುತ್ತದೆ ಎಂದು ಈ ವರದಿ ಎಚ್ಚರಿಕೆ ನೀಡಿದೆ. ಸ್ವಯಂ ಸೇವಾ ಸಂಸ್ಥೆಗಳು ಸಲ್ಲಿಸಿರುವ ವಾರ್ಷಿಕ ಲೆಕ್ಕಪತ್ರ ವರದಿ ಆಧರಿಸಿ ಗೃಹ ಸಚಿವಾಲಯ ಈ ವರದಿಯನ್ನು ಪ್ರಕಟಿಸಿದೆ. ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯಡಿಯಲ್ಲಿ ಒಟ್ಟಾರೆ 43,527 ನೋಂದಾಯಿತ ‘ಎನ್‌ಜಿಒ’ಗಳಿದ್ದು, ಇವುಗಳಲ್ಲಿ ಈಗ 22,702 ಸಂಸ್ಥೆಗಳು ಮಾತ್ರ ವಾರ್ಷಿಕ ಲೆಕ್ಕಪತ್ರದ ವರದಿಯನ್ನು ಸಲ್ಲಿಸಿವೆ.
ಇದರ ವಿದೇಶಿ ದೇಣಿಗೆಯ ಸಂಗ್ರಹ ಮೊತ್ತವೇ ರೂ.11,500 ಕೋಟಿಗೂ ಹೆಚ್ಚಿದ್ದು, ಎಲ್ಲಾ ‘ಎನ್‌ಜಿಒ’ಗಳಿಂದ ಲೆಕ್ಕಪತ್ರ ಸಲ್ಲಿಕೆಯಾದರೆ ಈ ಮೊತ್ತದಲ್ಲಿ ಇನ್ನೂ ಏರಿಕೆ ಆಗಲಿದೆ. ಈಗ ಲೆಕ್ಕಪತ್ರ ವರದಿ ಸಲ್ಲಿಸಿರುವ ‘ಎನ್‌ಜಿಒ’ಗಳಲ್ಲಿ 9,509 ಸಂಸ್ಥೆಗಳು ವಿದೇಶದಿಂದ ದೇಣಿಗೆ ಸಂಗ್ರಹಿಸಿಲ್ಲ ಎಂದು ತಿಳಿಸಿವೆ.
‘ವರ್ಷದಿಂದ ವರ್ಷಕ್ಕೆ ವಿದೇಶಗಳಿಂದ ದೇಣಿಗೆ ಸಂಗ್ರಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಖ್ಯೆ ಏರುತ್ತಿದೆ. ಇನ್ನೂ ಹಲವು ಸಂಸ್ಥೆಗಳು ಕಡ್ಡಾಯವಾಗಿ ಸಲ್ಲಿಸಬೇಕಿರುವ ವಾರ್ಷಿಕ ಲೆಕ್ಕಪತ್ರ ವರದಿ ಸಲ್ಲಿಸದಿರುವುದು ಆತಂಕಕ್ಕೆ ಕಾರಣವಾಗಿದೆ. ನೋಂದಾಯಿಸದ 20 ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳು ದೇಶದಲ್ಲಿವೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.