ADVERTISEMENT

ರೂ12,350 ಕೋಟಿ ಮಂಜೂರಾತಿಗೆ ಅನುಮೋದನೆ

ಆಹಾರಧಾನ್ಯ ಉತ್ಪಾದನೆ ಹೆಚ್ಚಳ ಉದ್ದೇಶ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ರಾಷ್ಟ್ರೀಯ ಆಹಾರ ಭದ್ರತಾ ಆಂದೋಲನದಡಿ (ಎನ್‌ಎಫ್‌ಎಸ್‌ಎಂ) 12ನೇ ಪಂಚ ವಾರ್ಷಿಕ ಯೋಜನಾ ಅವಧಿಯಲ್ಲಿ ಆಹಾರಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಸರ್ಕಾರವು ರೂ12,350 ಕೋಟಿ ಮಂಜೂರಾತಿಗೆ ಅನುಮೋದನೆ ನೀಡಿದೆ.

ಆಹಾರಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

11ನೇ ಪಂಚವಾರ್ಷಿಕ ಯೋಜನೆಯಲ್ಲಿ (2007– 2012) ರೂ 4,882.48 ಕೋಟಿ ಮೀಸಲಿಟ್ಟು ಮೊತ್ತ ಮೊದಲ ಬಾರಿಗೆ ಎನ್‌ಎಫ್‌ಎಸ್‌ಎಂ ಜಾರಿಗೆ ತರಲಾಗಿತ್ತು. ನಂತರ, ಉದ್ದೇಶಿತ ಗುರಿ ಸಾಧನೆಯಾಗಿ ಆಹಾರಧಾನ್ಯಗಳ ಉತ್ಪಾದನೆ 2 ಕೋಟಿ ಟನ್‌ಗಳಷ್ಟು ಹೆಚ್ಚಾಗಿತ್ತು.

ಸರ್ಕಾರ ಈಗ ಈ ಆಂದೋಲನಕ್ಕಾಗಿ ರೂ 12,350 ಕೋಟಿ ಮಂಜೂರು ಮಾಡಿರುವುದರಿಂದ 2016–17ರ ವೇಳೆಗೆ ರಾಷ್ಟ್ರದಲ್ಲಿ ಆಹಾರಧಾನ್ಯಗಳ ಉತ್ಪಾದನೆ ಇನ್ನೂ 2.5 ಕೋಟಿ ಟನ್‌ಗಳಷ್ಟು ಹೆಚ್ಚಾಗಲಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಮನೀಶ್‌ ತಿವಾರಿ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಹೇಳಿದರು.

ಎನ್‌ಎಫ್‌ಎಸ್‌ಎಂ ಯೋಜನೆಯು ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳು ಸೇರಿದಂತೆ ರಾಷ್ಟ್ರದ 27 ರಾಜ್ಯಗಳಲ್ಲಿ ಅನುಷ್ಠಾನವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.