ADVERTISEMENT

ರೆಡ್ಡಿಗಳ ಸಿಬಿಐ ತನಿಖೆ ಮತ್ತೆ ಆರಂಭ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ಹೈದರಾಬಾದ್ (ಐಎಎನ್‌ಎಸ್): ಅಕ್ರಮ ಗಣಿಗಾರಿಕೆ ಆರೋಪದಲ್ಲಿ ವಾರದ ಹಿಂದೆ ಬಂಧಿಸಲ್ಪಟ್ಟಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರ ತನಿಖೆಯನ್ನು ಸಿಬಿಐ ಮಂಗಳವಾರ ಮಧ್ಯಾಹ್ನದ ನಂತರ ಮತ್ತೆ ಆರಂಭಿಸಿತು.

ಸಿಬಿಐ ವಿಶೇಷ ನ್ಯಾಯಾಲಯವು ಮಂಗಳವಾರ ಬೆಳಿಗ್ಗೆ ಆರೋಪಿಗಳನ್ನು ಆರು ದಿನಗಳ ತನಿಖೆಗಾಗಿ ಸಿಬಿಐ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ ಬಳಿಕ ಈ ತನಿಖೆ ಆರಂಭವಾಗಿದೆ. ಚಂಚಲ್‌ಗುಡಾ ಕೇಂದ್ರ ಕಾರಾಗೃಹದಲ್ಲಿದ್ದ ಈ ಇಬ್ಬರನ್ನು ಇಲ್ಲಿನ ಸಿಬಿಐ ಕಚೇರಿಗೆ ಈಗ ಸ್ಥಳಾಂತರಿಸಲಾಗಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಈ ತನಿಖೆ ನಡೆಯುತ್ತಿದೆ.

ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಬಿಐ ಜಂಟಿ ನಿರ್ದೇಶಕ ವಿ.ವಿ. ಲಕ್ಷ್ಮೀನಾರಾಯಣ, `ಬಂಧಿತ ರೆಡ್ಡಿಗಳ ತನಿಖೆಯಲ್ಲಿ ಹೆಸರಿಸಲ್ಪಡುವ ಇತರ ಎಲ್ಲ ಆರೋಪಿಗಳನ್ನು ಸಹ ಬಂಧಿಸಿ ತನಿಖೆಗೊಳಪಡಿಸಲಾಗುವುದು~ ಎಂದರು. “ನಾವು ಯಾರನ್ನು ಬೇಕಿದ್ದರೂ ತನಿಖೆಗೆ ಒಳಪಡಿಸಬಹುದು ಮತ್ತು ಯಾವ ಸ್ಥಳದ ಮೇಲೆ ಬೇಕಿದ್ದರೂ ದಾಳಿ ನಡೆಸಬಹುದು” ಎಂದು ಅವರು ತಿಳಿಸಿದರು. 

 `ತನಿಖಾ ಅವಧಿ ವಿಸ್ತರಿಸುವಂತೆ ಕೋರಿ ಸಿಬಿಐ ಮತ್ತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬಹುದು. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಆರೋಪಿಗಳ ಒಪ್ಪಿಗೆಯನ್ವಯ ಅವರನ್ನು ಮಂಪರು ಪರೀಕ್ಷೆ, ಸುಳ್ಳುಪತ್ತೆ ಪರೀಕ್ಷೆ ಹಾಗೂ ಮೆದುಳು ವಿಶ್ಲೇಷಣೆ ಪರೀಕ್ಷೆಗಳಿಗೂ ಒಳಪಡಿಸಬಹುದಾಗಿದೆ~ ಎಂದೂ ಅವರು ಹೇಳಿದರು.

ಹೈಕೋರ್ಟ್‌ಗೆ ಮೊರೆ: ಈ ಮಧ್ಯೆ, ರೆಡ್ಡಿಗಳಿಗೆ ಜಾಮೀನು ನಿರಾಕರಿಸಿರುವ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅವರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ನಡುವೆಯೂ ಹೆಚ್ಚುವರಿ ಎಸ್ಪಿ ಆರ್.ಎಂ.ಖಾನ್ ನೇತೃತ್ವದ ಸಿಬಿಐ ಅಧಿಕಾರಿಗಳ ತಂಡ ಚಂಚ ಲ್‌ಗುಡಾ ಕಾರಾಗೃಹದಲ್ಲಿದ್ದ ಆರೋಪಿ ಗಳನ್ನು ತಮ್ಮ ವಶಕ್ಕೆ ಪಡೆದು, ತನಿಖೆ ಗಾಗಿ ಸಿಬಿಐ ಕಚೇರಿಗೆ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.