ADVERTISEMENT

`ರೈತರ ಆತ್ಮಹತ್ಯೆ'ಯಲ್ಲೂ ರಾಜಕೀಯ!

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಅಹಮದಾಬಾದ್: ಗುಜರಾತಿನಲ್ಲಿ ಹತ್ತಿ ಬೆಳೆದ ರೈತರು ಉರುಳಿಗೆ ಕೊರಳು ಕೊಡುತ್ತಿದ್ದಾರೆ. ಮುಂಗಾರು ವೈಫಲ್ಯದಿಂದ ಶೇಂಗಾ ಮೊದಲೇ ಕೈತಪ್ಪಿದೆ. ಈಗ ಹತ್ತಿಯೂ ಒಣಗಿದೆ. ಸಾಲಸೋಲ ಮಾಡಿ ಬೆಳೆ ಬೆಳೆದು ಹತಾಶರಾದ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಮುಂಗಾರು ಕೈಕೊಟ್ಟ ಬಳಿಕ 35ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ವಿಧಾನಸಭೆ ಚುನಾವಣೆ ಮೇಲೆ `ರೈತರ ಆತ್ಮಹತ್ಯೆ ಪ್ರಕರಣ'ಗಳು ತೀವ್ರ ಪರಿಣಾಮ ಬೀರಬಹುದು ಎಂದು ಭಾವಿಸಲಾಗಿದೆ.

ಹತ್ತಿ ಉತ್ಪಾದನೆಯಲ್ಲಿ ಗುಜರಾತಿನದು ಬಹು ದೊಡ್ಡ ಕೊಡುಗೆ. ನೆರೆಯ ಮಹಾರಾಷ್ಟ್ರಕ್ಕಿಂತ ಮೂರು ಪಟ್ಟು ಹೆಚ್ಚು ಇಳುವರಿ ಬರುತ್ತದೆ. 1/3ರಷ್ಟ ಬೆಳೆಗೆ ಬಾವಿಗಳಿಂದ ನೀರು ಪೂರೈಕೆ ಆಗುತ್ತದೆ. ಈ ಸಲ ಮಳೆ ಅಭಾವದಿಂದ ಬಾವಿಗಳಲ್ಲಿ ನೀರೂ ಬತ್ತಿದೆ.

ಗುಜರಾತಿನ ಪರಿಸ್ಥಿತಿ ಹಿಂದೆ ಹೀಗಿರಲಿಲ್ಲ. ಮಹಾರಾಷ್ಟ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಆತ್ಮಹತ್ಯೆಗಳು ನಡೆದರೂ  ರೈತರು ತಲೆ ಕೆಡಿಸಿಕೊಂಡಿರಲಿಲ್ಲ. ಸಮಸ್ಯೆ ನಿಭಾಯಿಸುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಕೃಷಿ ವೆಚ್ಚ ದುಬಾರಿ ಆಗಿ ಆತಂಕಕ್ಕೆ ಒಳಗಾಗಿದ್ದಾರೆ.

`ಹತ್ತಿ ಬೆಳೆ ನಷ್ಟದ ಜತೆ ದರವೂ ಕುಸಿದಿರುವುದು ಬೆಳೆಗಾರರನ್ನು ಚಿಂತಿಗೀಡುಮಾಡಿದೆ. ಮಳೆ ಅಭಾವದಿಂದ ಗುಣಮಟ್ಟ ಕಡಿಮೆಯಾಗಿದ್ದು ಹತ್ತಿ  ರಫ್ತು ಮಾಡಲು ಆಗುತ್ತಿಲ್ಲ. ಅಮೆರಿಕ, ಚೀನಾ ಬಾಂಗ್ಲಾ ಮತ್ತು ಪಾಕಿಸ್ತಾನಕ್ಕೆ ಹತ್ತಿ ರಫ್ತಾಗುತ್ತಿದೆ. ಆ ದೇಶಗಳಲ್ಲೇ ಹತ್ತಿ ಅಧಿಕ ಉತ್ಪಾದನೆ ಆಗಿದೆ.

ನಮ್ಮ ಉತ್ಪನ್ನದ ಗುಣಮಟ್ಟ ಕಡಿಮೆ ಇರುವುದರಿಂದ ಖರೀದಿ ಆಗುತ್ತಿಲ್ಲ ಎಂದು ರಾಜ್‌ಕೋಟ್ ಕೃಷಿ ಮಾರುಕಟ್ಟೆ ಹತ್ತಿ ವರ್ತಕರ ಸಂಘದ ಅಧ್ಯಕ್ಷ `ಜಲರಾಂ ಟ್ರೇಡಿಂಗ್ ಕಂ' ಮಾಲೀಕ ಶ್ಯಾಂಜಿಭಾಯ್ ಬೂಸ  ಹೇಳುತ್ತಾರೆ. ಕೇಂದ್ರ ಸರ್ಕಾರ ಹತ್ತಿ ರಫ್ತಿಗೆ ಮುಕ್ತ ಅವಕಾಶ ನೀಡಿದೆ. ಆದರೆ, ಕೊಳ್ಳುವವರಿಲ್ಲ. ಹೋದ ವರ್ಷ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗಿತ್ತು ಎಂಬುದು ಶ್ಯಾಂಜಿ ಅಭಿಪ್ರಾಯ.

ಸೌರಾಷ್ಟ್ರದ ರಸ್ತೆ ಬದಿಗಳಲ್ಲಿ ಒಣಗಿ ಬೋಳು ಬೋಳಾದ ಹತ್ತಿ ಗಿಡಗಳು ಕಾಣುತ್ತವೆ. ಕೆಲವು ಹಳ್ಳಿಗಳಲ್ಲಿ ರೈತರು ಗಿಡಗಳನ್ನು ಕಿತ್ತು ಗುಡ್ಡೆ ಹಾಕಿ ಬೆಂಕಿ ಹಚ್ಚಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಳೆ ಹಾನಿಗೆ ಪರಸ್ಪರರನ್ನು ದೂರುತ್ತಿವೆ. ರೈತರ ಆತ್ಮಹತ್ಯೆ ಪ್ರಕರಣಗಳನ್ನು ಚುನಾವಣೆಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ.  ಹತ್ತಿ ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆ ಹಾದಿ ಹಿಡಿದಿಲ್ಲ.

ADVERTISEMENT

ಬೇರೆ ಬೇರೆ  ಕೌಟುಂಬಿಕ ಸಮಸ್ಯೆಗಳಿಂದ ಹತಾಶರಾಗಿ ನೇಣು ಬಿಗಿದುಕೊಳ್ಳುತ್ತಿದ್ದಾರೆ. ಕ್ರಿಮಿನಾಶಕ ಸೇವಿಸುತ್ತಿದ್ದಾರೆ ಎಂದು ಕೃಷಿ  ಹಾಗೂ ಪೊಲೀಸ್ ಇಲಾಖೆ ಪ್ರತಿಪಾದಿಸುತ್ತಿವೆ. `ಹತ್ತಿ ಬೆಳೆಗಾರರು ಸೌರಾಷ್ಟ್ರದಲ್ಲಿ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆಪಾದಿಸುತ್ತಿದ್ದಾರೆ. ನಮ್ಮ ಕಷ್ಟವನ್ನು ಯಾರೂ ಕೇಳುವವರಿಲ್ಲ. ಎಲ್ಲರೂ ಓಟಿಗಾಗಿ ಬರುವವರೆ. ವೇದಿಕೆಗಳ ಮೇಲೆ ದೊಡ್ಡ ದೊಡ್ಡ ಭಾಷಣ ಮಾಡುವವರೆ. ಎಲ್ಲ ಬರೀ ಬಾಯಿ ಮಾತಿನ ಅನುಕಂಪ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹತ್ತಿ ಬೆಳೆಗಾರರ ಸಮಸ್ಯೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಕಸರತ್ತು ನಡೆಸುತ್ತಿವೆ. ಚುನಾವಣೆ ಪ್ರಚಾರ ಭಾಷಣಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಪ್ರಸ್ತಾಪ ಮಾಡುತ್ತಿವೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕೇಶುಭಾಯ್ ಪಟೇಲರ `ಗುಜರಾತ್ ಪರಿವರ್ತನಾ ಪಕ್ಷ'ವೂ ಇದೇ ಸಮಸ್ಯೆ ಮೇಲೆ ಗಮನ ಕೇಂದ್ರಿಕರಿಸಿದೆ. ಗುಜರಾತಿನಲ್ಲಿ ಹತ್ತಿ ಬೆಳೆಗಾರರ ಸಮಸ್ಯೆ ಗಂಭೀರವಾಗಿದೆ. ರಾಜಕೀಯವಾಗಿ ಇದು ಯಾವ ಪಕ್ಷಕ್ಕೆ ಎಷ್ಟು ಲಾಭ ಮಾಡಿಕೊಡಲಿದೆ ಎಂದು ಹೇಳುವುದು ಕಷ್ಟ.

ಜುನಾಗಢ ಯುವ ರೈತನ ಸಂದರ್ಶನ
`ಭಿಲ್ಕಾ' ಜುನಾಗಢ ಜಿಲ್ಲೆಯ ಪುಟ್ಟ ಪಟ್ಟಣ. ಅರ್ಧಕ್ಕೆ ಓದು ಬಿಟ್ಟಿರುವ ಅನೇಕ ಯುವಕರು ಕೃಷಿಯಲ್ಲಿ ತೊಡಗಿದ್ದಾರೆ. ಅಂಥವರಲ್ಲಿ ಜಯೇಶ್ ಭಾಯ್ ಒಬ್ಬರು. ಹತ್ತಿ ಬೆಳೆ ನಷ್ಟದಿಂದ ತತ್ತರಿಸಿರುವ ಅವರು ಸುತ್ತಮುತ್ತಲ ಹಳ್ಳಿಗರ ಬದುಕಿನ ಮೇಲೆ ಸಣ್ಣ ಬೆಳಕು ಚೆಲ್ಲಿದ್ದಾರೆ.

ಹತ್ತಿ ಬೆಳೆ ನಷ್ಟ ಯಾವ ಪ್ರಮಾಣದಲ್ಲಿ ಆಗಿದೆ?
`ಹತ್ತು ಎಕರೆ ಭೂಮಿಯಲ್ಲಿ ಕೃಷ್ಣ ಹತ್ತಿ ಹಾಕಿದ್ದೆ.  ಬೆಳೆ ಕೈಗೆ ಬರಲಿಲ್ಲ. 80 ಸಾವಿರ ಖರ್ಚಾಗಿದೆ. ಬೆಳೆ ಚೆನ್ನಾಗಿದ್ದರೆ 20 ಟನ್ ಬರುತ್ತಿತ್ತು. ಕ್ವಿಂಟಲ್‌ಗೆ ಐದು ಸಾವಿರ ಹಿಡಿದರೂ ಸುಮಾರು 10  ಲಕ್ಷ ದುಡ್ಡು ಸಿಗುತಿತ್ತು. ಹತ್ತಿಗೆ ಮೊದಲು ಶೇಂಗಾವೂ ಹೋಯಿತು. ಹೀಗಾದರೆ ರೈತರು ಬದುಕುವುದು ಹೇಗೆ. ನಮ್ಮ ಸುತ್ತಮುತ್ತಲ ಹಳ್ಳಿಗಳಲ್ಲಿ ಒಂದೂವರೆ ಎರಡು ತಿಂಗಳಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ'.

ಹತ್ತಿ ಬೆಳೆಗಾರರ ನೆರವಿಗೆ ಸರ್ಕಾರ ಬಂದಿದೆಯೇ?
`ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಇದುವರೆಗೆ ಹತ್ತಿ ಬೆಳೆಗಾರರ ನೆರವಿಗೆ ಮುಂದಾಗಿಲ್ಲ. ಕೇಂದ್ರ ಸರ್ಕಾರ ರಾಜ್ಯದ ಕಡೆ ಬೆರಳು ತೋರಿಸುತ್ತಿದೆ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಹಾಕುತ್ತಿದೆ. ಎರಡೂ ಸರ್ಕಾರದ ನಡುವೆ ಸಿಕ್ಕಿ ರೈತರು ಹಣ್ಣಾಗಿದ್ದಾರೆ.

ಹತ್ತಿ ಬೆಳೆಗಾರರ ಸಮಸ್ಯೆ ಚುನಾವಣೆ ಮೇಲೆ ಪರಿಣಾಮ ಬೀರುವುದೇ?
`ಸಮಸ್ಯೆ ಅತ್ಯಂತ ಗಂಭೀರವಾಗಿದೆ. ಇದರ ಲಾಭ ಪಡೆದುಕೊಳ್ಳಲು ಎಲ್ಲ ಪಕ್ಷಗಳು ಪ್ರಯತ್ನ ನಡೆಸಿವೆ. ರೈತರು ಏನು ಮಾಡುತ್ತಾರೆ; ಯಾವ ರೀತಿ ಚಿಂತಿಸುತ್ತಾರೆಂದು ಹೇಳುವುದು ಕಷ್ಟ'.

(ನಾಳಿನ ಸಂಚಿಕೆಯಲ್ಲಿ ಭಾಗ 9)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.