ADVERTISEMENT

ರೈಲ್ವೆ: ಸ್ಮಾರ್ಟ್‌ ಆರೋಗ್ಯ ಕಾರ್ಡ್‌

ಪಿಟಿಐ
Published 16 ಜೂನ್ 2018, 19:15 IST
Last Updated 16 ಜೂನ್ 2018, 19:15 IST

ನವದೆಹಲಿ: ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಸದ್ಯ ನೀಡಲಾಗಿರುವ ದೊಡ್ಡ ವೈದ್ಯಕೀಯ ಕಾರ್ಡ್‌ಗಳಿಗೆ ಬದಲಾಗಿ, ಕ್ರೆಡಿಟ್‌ ಕಾರ್ಡ್‌ ರೀತಿಯ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲು ಇಲಾಖೆ ಚಿಂತನೆ ನಡೆಸಿದೆ.

ಈಗ ರೈಲ್ವೆ ವಲಯಗಳಲ್ಲಿ ನೀಡಲಾಗಿರುವ ವೈದ್ಯಕೀಯ ಕಾರ್ಡ್‌ಗಳು ಪಡಿತರ ಕಾರ್ಡ್‌ಗಳಂತೆ ಕಿರು ಪುಸ್ತಕಗಳ ರೀತಿಯಲ್ಲಿವೆ.

ಪ್ರತ್ಯೇಕ ವೈದ್ಯಕೀಯ ಗುರುತಿನ ಕಾರ್ಡ್‌ಗಳು ವಿಶಿಷ್ಟವಾದ ಅಖಿಲ ಭಾರತ ಮಟ್ಟದ ಸಂಖ್ಯೆ ಹೊಂದಿರುತ್ತವೆ ಎಂದು ರೈಲ್ವೆ ಮಂಡಳಿ ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ADVERTISEMENT

ಇಲಾಖೆಯ ಉದ್ಯೋಗಿಗಳು ಹಾಗೂ ಅವರ ಅವಲಂಬಿತರಿಗೆ ನೀಡುವ ವೈದ್ಯಕೀಯ ಗುರುತಿನ ಕಾರ್ಡ್‌ಗಳಲ್ಲಿ ಏಕರೂಪತೆ ತರಲು, ಒಂದೇ ಅಳತೆಯ ಪ್ಲಾಸ್ಟಿಕ್‌ ಕಾರ್ಡ್‌ಗಳ ವಿತರಣೆಗೆ ಮಂಡಳಿ ಒಪ್ಪಿಗೆ ನೀಡಿದೆ. ಇವುಗಳ ಗಾತ್ರವು ಬ್ಯಾಂಕ್‌ಗಳ ಡೆಬಿಟ್‌/ ಕ್ರೆಡಿಟ್‌ ಕಾರ್ಡ್‌ನಷ್ಟೇ ಇರುತ್ತದೆ.

ಈ ಕಾರ್ಡ್‌ಗಳು ಬಣ್ಣದ ಪಟ್ಟಿ ಹೊಂದಿರುತ್ತವೆ. ಈ ಪಟ್ಟಿಯಲ್ಲಿನ ಬಣ್ಣದಿಂದ ಕಾರ್ಡ್‌ದಾರರು ಹಾಲಿ ಉದ್ಯೋಗಿಗಳೇ, ನಿವೃತ್ತರೇ, ಇಲ್ಲವೇ ಅವಲಂಬಿತರೇ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ.

ಹದಿನೈದು ವರ್ಷದವರೆಗಿನ ಫಲಾನುಭವಿಗಳಿಗೆ ನೀಡುವ ಕಾರ್ಡ್‌ಗಳನ್ನು ಐದು ವರ್ಷದವರೆಗೆ ಬಳಸಬಹುದಾಗಿದ್ದು, ಆನಂತರ ನವೀಕರಣ ಮಾಡಿಕೊಳ್ಳಬೇಕು.

ಪ್ರಸ್ತುತ ಇಲಾಖೆಯಲ್ಲಿ 13 ಲಕ್ಷ ನೌಕರರು ಹಾಗೂ ಅಷ್ಟೇ ಸಂಖ್ಯೆಯ ಪಿಂಚಣಿದಾರರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.