ADVERTISEMENT

ರೋಡ್‌ ಶೋ ವೇಳೆ ಮೋದಿ ಹತ್ಯೆಗೆ ಸಂಚು

ಅಮೆರಿಕದ ಎಂ–4 ರೈಫಲ್‌, ಗುಂಡು ಖರೀದಿಗೆ ₹8 ಕೋಟಿ ಸಂಗ್ರಹದ ಗುರಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಅಮೆರಿಕದ ಎಂ–4 ರೈಫಲ್‌ ಬಳಸಲು ಮಾವೊವಾದಿ ನಕ್ಸಲೀಯರು ಸಂಚು ರೂಪಿಸಿದ್ದ ವಿಷಯ ದೆಹಲಿಯ ಮನೆಯೊಂದರಲ್ಲಿ ಪುಣೆ ಪೊಲೀಸರ ಕೈಗೆ ಸಿಕ್ಕ ಇ–ಮೇಲ್‌ನಿಂದ ಬಹಿರಂಗವಾಗಿದೆ.

ರೋಡ್‌ ಶೋಗಳಲ್ಲಿ ಮೋದಿ ಅವರನ್ನು ಮುಗಿಸುವುದು ಹಂತಕರ ಯೋಜನೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕೋರೆಗಾಂವ್‌–ಭೀಮಾ ಹಿಂಸಾಚಾರದಲ್ಲಿ ಮಾವೊವಾದಿಗಳ ಪಾತ್ರದ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರು ಮಂಗಳವಾರ ಐವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ADVERTISEMENT

ಬಂಧಿತರಲ್ಲಿ ಒಬ್ಬರಾದ ರಾಜಕೀಯ ಕೈದಿಗಳ ಬಿಡುಗಡೆ ಸಮಿತಿಯ ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ ರೋನಾ ವಿಲ್ಸನ್‌ ಅವರ ದೆಹಲಿಯ ಮನೆಯನ್ನು ಶೋಧಿಸುತ್ತಿದ್ದ ವೇಳೆ ಇ–ಮೇಲ್‌ ಸಿಕ್ಕಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕಾಮ್ರೇಡ್ ಪ್ರಕಾಶ್‌ ಅವರನ್ನು ಉದ್ದೇಶಿಸಿ 2017ರ ಏಪ್ರಿಲ್‌ 18ರಂದು ಈ ಪತ್ರ ಬರೆಯಲಾಗಿದ್ದು, ‘ಆರ್‌’ ಎಂದು ಸಹಿ ಹಾಕಲಾಗಿದೆ. ನಿಷೇಧಿತ ಸಿಪಿಐ (ಮಾವೊವಾದಿ) ಕೇಂದ್ರ ಸಮಿತಿ ಸದಸ್ಯ ಈ ಇ–ಮೇಲ್‌ ಕಳಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆಯ ರೀತಿಯಲ್ಲಿಯೇ ಮತ್ತೊಂದು ಹತ್ಯೆ ನಡೆಯಲಿದೆ. ಅದಕ್ಕೆ ಬೇಕಾದ ಎಂ–4 ರೈಫಲ್‌ ಮತ್ತು ನಾಲ್ಕು ಲಕ್ಷ ಗುಂಡಿನ ಖರೀದಿಗೆ ₹8 ಕೋಟಿ ಅಗತ್ಯವಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಪತ್ರದಲ್ಲಿ ಇರುವುದೇನು?: ‘ಹಿಂದೂ ಭಯೋತ್ಪಾದನೆಯನ್ನು ಹತ್ತಿಕ್ಕುವುದು ನಮ್ಮ ಮತ್ತು ನಮ್ಮ ಪಕ್ಷದ ಮೊದಲ ಧ್ಯೇಯ’ ಎಂದು ಪತ್ರವನ್ನು ಆರಂಭಿಸಲಾಗಿದೆ.

‘ಈ ದೇಶದ ಮೂಲ ನಿವಾಸಿಗಳು, ಆದಿವಾಸಿಗಳ ಬದುಕನ್ನು ಮೋದಿ ನೇತೃತ್ವದ ಹಿಂದೂ ಮೂಲಭೂತವಾದಿಗಳ ಸಾಮ್ರಾಜ್ಯವು ಅಸಹನೀಯಗೊಳಿಸಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದ ಸೋಲಿನ ಹೊರತಾಗಿಯೂ ಮೋದಿ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಇದೇ ರೀತಿ ಮುಂದುವರಿದರೆ ಪಕ್ಷಕ್ಕೆ ತೊಂದರೆಯಾಗಲಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

‘ಅಂತಿಮವಾಗಿ ನಮ್ಮ ಪಕ್ಷದ ಉಳಿವು ಎಲ್ಲ ತ್ಯಾಗಗಳಿಗೂ ಮಿಗಿಲು. ಇನ್ನುಳಿದ ವಿಷಯ ಮುಂದಿನ ಪತ್ರದಲ್ಲಿ...’ ಎಂದು ಪತ್ರ ಮುಗಿಸಲಾಗಿದೆ. ಮಾವೊವಾದಿಗಳ ನಡುವಣ ಆಂತರಿಕ ಸಂವಹನದ ಭಾಗವಾಗಿ ಈ ಪತ್ರ ಬರೆಯಲಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಆರೋಪ ನಿರಾಕರಣೆ: ಬಾಂಬೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಹಾಗೂ ಕಾರ್ಯಕರ್ತ ಬಿ.ಜಿ. ಖೊಲ್ಸೆ–ಪಾಟೀಲ ಅವರು ಪುಣೆ ಪೊಲೀಸರ ಆರೋಪವನ್ನು ತಳ್ಳಿ ಹಾಕಿದ್ದಾರೆ.

‘ಈ ಪತ್ರ ಸುಳ್ಳು ಸೃಷ್ಟಿ. ಅಂತರ್ಜಾಲ ಯುಗದಲ್ಲಿ ಇದೆಲ್ಲ ಸುಲಭ’ ಎಂದು ಅವರು ಹೇಳಿದ್ದಾರೆ.

‘ಪ್ರಧಾನಿ ಹತ್ಯೆ ಸಂಚನ್ನು ಸಂಪೂರ್ಣ ಸುಳ್ಳು ಎಂದು ಹೇಳಲಾರೆ. ಆದರೆ, ಪೊಲೀಸರ ಈ ಆರೋಪದಲ್ಲಿ ಎಷ್ಟು ಹುರುಳಿದೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ಒತ್ತಾಯಿಸಿದ್ದಾರೆ.

‘ಪ್ರಧಾನಿ ಹತ್ಯೆಯ ಸಂಚಿನ ವಿಷಯ ಹೊಂದಿರುವ ಇ–ಮೇಲ್‌ ಬಗ್ಗೆ ತನಿಖೆ ನಡೆಸಬೇಕು’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಒತ್ತಾಯಿಸಿದ್ದಾರೆ.
*
ಬಂಧಿತರೆಲ್ಲ ವಿದ್ಯಾವಂತರು
ಕೋರೆಗಾಂವ್‌–ಭೀಮಾ ಹಿಂಸಾಚಾರ ಪ್ರಕರಣದ ಸಂಬಂಧ ಪುಣೆ ಪೊಲೀಸರು ಬಂಧಿಸಿರುವ ಎಲ್ಲರೂ ಒಳ್ಳೆಯ ಹುದ್ದೆಯಲ್ಲಿದ್ದಾರೆ. ಬಂಧಿತ ಸುರೇಂದ್ರ ಗಾಡ್ಗೀಳ್‌ ಅವರು ನಾಗ್ಪುರದ ಇಂಡಿಯನ್‌ ಅಸೋಯೇಷನ್‌ ಫಾರ್ ಪೀಪಲ್ಸ್‌ ಲಾಯರ್ಸ್‌ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದರೆ, ಪ್ರೊ. ಶೋಮಾ ಸೆನ್‌ ಅವರು ನಾಗ್ಪುರ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥರು.

ಮುಂಬೈನಿಂದ ಪ್ರಕಟವಾಗುವ ವಿದ್ರೋಹಿ ಪತ್ರಿಕೆಯ ಸಂಪಾದಕ ಸುಧೀರ್‌ ಧಾವಲೆ ಮತ್ತು ಭಾರತ ಜನಾಂದೋಲನ ಕಾರ್ಯಕರ್ತ ಮಹೇಶ್‌ ರಾವತ್‌ ಕೂಡ ಬಂಧಿತರಲ್ಲಿ ಸೇರಿದ್ದಾರೆ.

ರಾವತ್‌ ಈ ಮೊದಲು ಗಡ್‌ಚಿರೋಲಿ ಜಿಲ್ಲೆಯ ‘ಪ್ರಧಾನ ಮಂತ್ರಿ ಗ್ರಾಮೀಣ ಅಭಿವೃದ್ಧಿ ಯೋಜನೆ’ಯಲ್ಲಿ ಕೆಲಸ ಮಾಡುತ್ತಿದ್ದರು.
*
ಕಟ್ಟುಕತೆ: ಕಾಂಗ್ರೆಸ್‌ 
‘ಇದೊಂದು ಕಟ್ಟುಕಥೆ’ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್‌ ಲೇವಡಿ ಮಾಡಿದೆ. ಮೋದಿ ಅವರ ಜನಪ್ರಿಯತೆ ಕುಗ್ಗಿದಾಗಲೆಲ್ಲ ಅವರ ಹತ್ಯೆಯ ಸಂಚಿನ ಕಥೆಯನ್ನು ಹರಿಬಿಡಲಾಗುತ್ತದೆ. ಇಂತಹ ಕಟ್ಟುಕಥೆಗಳನ್ನು ಹೆಣೆಯುವುದು ಮೋದಿ ಅವರ ಹಳೆಯ ತಂತ್ರ ಎಂದು ಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.