ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ವಿಮಾನ ಎಂಜಿನ್ ಪೂರೈಕೆಯ ರೂ.10 ಸಾವಿರ ಕೋಟಿ ವ್ಯವಹಾರದಲ್ಲಿ ಲಂಚ ನೀಡಿಕೆ ಮತ್ತು ಮಧ್ಯವರ್ತಿಗಳ ಬಳಕೆ ಆರೋಪದ ಬಗ್ಗೆ ಸಿಬಿಐ ತನಿಖೆ ಪೂರ್ಣಗೊಳ್ಳುವವರೆಗೆ ರೋಲ್ಸ್‌ರಾಯ್ಸ್ ಕಂಪೆನಿ ಜೊತೆಗಿನ ಪ್ರಸ್ತುತ ಮತ್ತು ಭವಿಷ್ಯದ ಎಲ್ಲ ವ್ಯವಹಾರಗಳನ್ನು ರಕ್ಷಣಾ ಸಚಿವಾಲಯ ತಡೆ ಹಿಡಿದಿದೆ.
ದಲ್ಲಾಳಿಗಳಿಗೆ ನೀಡಲಾದ ಹಣವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳುವಂತೆ ಲಂಡನ್ ಮೂಲದ ರೋಲ್ಸ್‌ರಾಯ್ಸ್ ಕಂಪೆನಿಗೆ ಎಚ್‌ಎಎಲ್ ಸೂಚಿಸಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಸಿಂಗಪುರ ಮೂಲದ ಅಶೋಕ್ ಪಟ್ನಿ ಎಂಬುವರ ಆಷ್‌ಮೋರ್ ಪ್ರೈ.ಲಿ. ಕಂಪೆನಿಯನ್ನು ಭಾರತದಲ್ಲಿ ವಾಣಿಜ್ಯ ಸಲಹೆಗಾರರಾಗಿ ನೇಮಿಸಲಾಗಿದೆ ಎಂದು ಕಳೆದ ಡಿಸೆಂಬರ್‌ನಲ್ಲಿಯೇ ಎಚ್‌ಎಎಲ್‌ಗೆ ಪತ್ರ ಬರೆದು ರೋಲ್ಸ್‌ರಾಯ್ಸ್ ತಿಳಿಸಿತ್ತು.
ಪೂರೈಕೆ ಗುತ್ತಿಗೆಯನ್ನು ಹಿಡಿದು ಕೊಟ್ಟಿರುವುದಕ್ಕೆ ಆಷ್‌ಮೋರ್ ಕಂಪೆನಿಗೆ ಒಟ್ಟು ವ್ಯವಹಾರದ ಶೇ 10ರಿಂದ 11.3ರವರೆಗೆ ಕಮಿಷನ್ ನೀಡಲಾಗಿದೆ ಎಂದೂ ರೋಲ್ಸ್‌ರಾಯ್ಸ್ ತಿಳಿಸಿತ್ತು. 2007ರಿಂದ 2011ರ ಅವಧಿಯಲ್ಲಿ ಎಚ್‌ಎಎಲ್ ಮತ್ತು ರೋಲ್ಸ್‌ರಾಯ್ಸ್ ನಡುವೆ ಐದು ಸಾವಿರ ಕೋಟಿಗೂ ಅಧಿಕ ಮೊತ್ತದ ವ್ಯವಹಾರ ನಡೆದಿದೆ. ಭಾರತದ ನಿಯಮ ಪ್ರಕಾರ ವ್ಯವಹಾರದಲ್ಲಿ ದಲ್ಲಾಳಿಗಳನ್ನು ನೇಮಿಸುವಂತಿಲ್ಲ ಮತ್ತು ಅವರಿಗೆ ಕಮಿಷನ್ ನೀಡುವಂತಿಲ್ಲ.
ರೋಲ್ಸ್‌ರಾಯ್ಸ್ ಕಂಪೆನಿಯೊಂದಿಗಿನ ಎಲ್ಲ ವ್ಯವಹಾರಗಳಿಗೆ ತಡೆ ಒಡ್ಡಿದ ನಂತರ ರಕ್ಷಣಾ ಸಚಿವಾಲಯವು ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ಕಾನೂನು ಸಚಿವಾಲಯದ ಸಲಹೆ ಪಡೆದಿದೆ. ಆದರೆ ರೋಲ್ಸ್‌ರಾಯ್ಸ್ ಕಂಪೆನಿಯೊಂದಿಗೆ ನಿರ್ವಹಣಾ ಒಪ್ಪಂದಕ್ಕೆ ಸಹಿ ಹಾಕುವುದು ವಿಳಂಬವಾದರೆ ರಕ್ಷಣಾ ಸನ್ನದ್ಧತೆಗೆ ತೊಂದರೆಯಾಗುತ್ತದೆ ಎಂಬುದು ವಾಯುಪಡೆಯ ಅಭಿಪ್ರಾಯವಾಗಿದೆ.
ಚೀನಾ ಮತ್ತು ಇಂಡೊನೇಷ್ಯಾ ಜೊತೆಗಿನ ವ್ಯವಹಾರದಲ್ಲಿಯೂ ಕಂಪೆನಿಯ ವಿರುದ್ಧ ಲಂಚದ ಆರೋಪ ಇದ್ದು, ಬ್ರಿಟನ್‌ನಲ್ಲಿ ಈ ಬಗ್ಗೆ ತನಿಖೆ ನಡೆಯುತ್ತಿದೆ. ಬ್ರಿಟನ್‌ನಿಂದಲೂ ಕಂಪೆನಿಯ ವ್ಯವಹಾರಗಳ ಬಗ್ಗೆ ಮಾಹಿತಿ ಪಡೆಯಲು ನಿರ್ಧರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.