ಹೈದರಾಬಾದ್ (ಪಿಟಿಐ): ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಪ್ರೊ. ವಿಪಿನ್ ಶ್ರೀವಾತ್ಸವ ಅವರನ್ನು ಉಸ್ತುವಾರಿ ಉಪಕುಲಪತಿ ಆಗಿ ನೇಮಕ ಮಾಡಿರುವುದನ್ನು ವಿರೋಧಿಸಿರುವ ವಿದ್ಯಾರ್ಥಿಗಳ ಜಂಟಿ ಕ್ರಿಯಾ ಸಮಿತಿಯು, ತಮ್ಮ ಬೇಡಿಕೆಗಳ ಈಡೇರಿಕೆಗೆ ಈ ತಿಂಗಳ 27ರಂದು ರಾಷ್ಟ್ರವ್ಯಾಪಿಚಳವಳಿಗೆ ಕರೆ ನೀಡಿದೆ.
ಬೇಡಿಕೆ ಈಡೇರದೆ ಇದ್ದರೆ ತೆಲಂಗಾಣ ಮತ್ತು ಆಂಧ್ರಪ್ರದೇಶ ಬಂದ್‌ಗೂ ಕರೆ ನೀಡಲಾಗುತ್ತದೆ ಎಂದು ಕ್ರಿಯಾ ಸಮಿತಿ ತಿಳಿಸಿದೆ. ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣವನ್ನು ವಿರೋಧಿಸಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ (ಎಚ್‌ಸಿಯು) ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆ ಸೋಮವಾರ ತೀವ್ರಗೊಂಡಿದೆ.
ಚಳವಳಿಯ ನೇತೃತ್ವ ವಹಿಸಿರುವ ಜಂಟಿ ಕ್ರಿಯಾ ಸಮಿತಿಯು ನೀಡಿರುವ ‘ಚಲೋ ಎಚ್‌ಸಿಯು’ ಕರೆಗೆ ಸ್ಪಂದಿಸಿರುವ ಬೇರೆ ಬೇರೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಸಾಮಾಜಿಕ ಸಂಘ ಟನೆಯ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ವಿಶ್ವವಿದ್ಯಾಲಯದಲ್ಲಿ ಸೇರಿರುವುದರಿಂದ ಉದ್ವಿಗ್ನ ವಾತಾ ವರಣ ನಿರ್ಮಾಣವಾಗಿದೆ.
ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ನಿಯಂತ್ರಣದಲ್ಲಿ ಇದೆ ಎಂದು ಎಚ್‌ಸಿಯು ಮುಖ್ಯ ಭದ್ರತಾ ಅಧಿಕಾರಿ ಟಿ. ವಿ. ರಾವ್ ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ವವಿದ್ಯಾ ಲಯದ ಆವರಣದಲ್ಲಿ ದೊಡ್ಡ ಸಂಖ್ಯೆ ಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಚಲೋ ಎಚ್‌ಸಿಯು ಚಳವಳಿಗೆ ಯಾವುದೇ ನಿರ್ಬಂಧ ಹೇರಿಲ್ಲ.
ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ವವಿದ್ಯಾಲಯ ಆವರಣ ಪ್ರವೇಶಿಸುವವರನ್ನು ಪರಿಶೀಲಿಸಲಾಗುತ್ತಿದೆ ಎಂದು ಸೈಬರಾಬಾದ್ ಜಂಟಿ ಪೊಲೀಸ್ ಕಮಿಷನರ್ ಟಿ. ವಿ. ಶಶಿಧರ್ ರೆಡ್ಡಿ ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ಆವರಣ ಪ್ರವೇಶಿಸಲು ಪೊಲೀಸರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಕೆಲವು ವಿದ್ಯಾ ರ್ಥಿಗಳು ಮತ್ತು ಅವರ ಬೆಂಬಲಿಗರು ದೂರಿದ್ದರು.
ಬೇಡಿಕೆ ಏನು?: ಈಗ ರಜೆಯ ಮೇಲೆ ತೆರಳಿರುವ ಉಪ ಕುಲಪತಿ ಪಿ. ಅಪ್ಪಾ ರಾವ್ ಅವರನ್ನು ವಜಾ ಮಾಡಬೇಕು, ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ‘ರೋಹಿತ್ ಕಾಯ್ದೆ’ ಜಾರಿಗೆ ತರಬೇಕು ಎಂಬುದು ಚಳವಳಿ ನಿರತ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿವೆ.
ರೋಹಿತ್ ಆತ್ಮಹತ್ಯೆಗೆ ಕಾರಣವಾದ ಕಾರ್ಯಕಾರಿ ಮಂಡಳಿಯ ಉಪ ಸಮಿತಿಯ ಮುಖ್ಯಸ್ಥರಾಗಿದ್ದ ಹಾಗೂ ಇನ್ನೊಬ್ಬ ದಲಿತ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣದಲ್ಲಿ ಆಪಾದಿತರಾಗಿರುವ ಪ್ರೊಪೆಸರ್ ವಿಪಿನ್ ಶ್ರೀವಾತ್ಸವ ಅವರನ್ನು ಉಸ್ತುವಾರಿ ಉಪ ಕುಲಪತಿ ಆಗಿ ನೇಮಿಸಿರುವುದಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಮೊಮ್ಮಗನ ಭೇಟಿ: ಈ ಮಧ್ಯೆ ಬಿ. ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ವಿಶ್ವವಿದ್ಯಾಲಯದ ಆವರಣಕ್ಕೆ ಭೇಟಿ ನೀಡಿ ಚಳವಳಿ ನಿರತರ ಜತೆ ಸಂವಾದ ನಡೆಸಿದರು. ಬಿಜೆಪಿ ಹೊರತುಪಡಿಸಿ ಎಲ್ಲಾ ರಾಜಕೀಯ ಪಕ್ಷಗಳೂ ವಿದ್ಯಾರ್ಥಿಗಳ ಚಳವಳಿಗೆ ಬೆಂಬಲ ವ್ಯಕ್ತಪಡಿಸಿವೆ. ಕಲ್ಲಿಕೋಟೆ, ಪುದುಚೇರಿಯ ವಿದ್ಯಾರ್ಥಿಗಳು, ಉಸ್ಮಾನಿಯಾ ಮತ್ತು ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಚಲೋ ಎಚ್‌ಸಿಯು ಚಳವಳಿಯಲ್ಲಿ ಭಾಗವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.