ADVERTISEMENT

ಲಂಚ: ಜಾಗೃತ ದಳದ ಬಲೆಗೆ ಮ್ಯಾಜಿಸ್ಟ್ರೇಟ್‌!

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:30 IST
Last Updated 25 ಮೇ 2018, 19:30 IST

ಪಟ್ನಾ: ಭೂವಿವಾದ ಪ್ರಕರಣವೊಂದರಲ್ಲಿ ಅನುಕೂಲಕರ ತೀರ್ಪು ನೀಡಲು ಬಡ ಮಹಿಳೆಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಿಹಾರದ ರೊಹತಾಸ್‌ ಜಿಲ್ಲಾ ಮ್ಯಾಜಿಸ್ಟ್ರೇಟ್‌, ಜಾಗೃತ ದಳದ ಬಲೆಗೆ ಬಿದ್ದಿದ್ದಾರೆ.

ಭೂವ್ಯಾಜ್ಯ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ರೊಹತಾಸ್‌ ಮ್ಯಾಜಿಸ್ಟ್ರೇಟ್‌ ಜಿ.ಕೆ. ರಾಮ್‌ ಅವರನ್ನು ಜಾಗೃತ ದಳದ ಸಿಬ್ಬಂದಿ ಗುರುವಾರ ಕೋರ್ಟ್‌ ರೂಂನಲ್ಲಿ ಬಂಧಿಸಿದ್ದಾರೆ.

ಹೆಚ್ಚಿನ ವಿಚಾರಣೆಗಾಗಿ ಅವರನ್ನು ಪಟ್ನಾದಲ್ಲಿರುವ ಜಾಗೃತದಳದ ಕೇಂದ್ರ ಕಚೇರಿಗೆ ಕರೆದೊಯ್ಯಲಾಗಿದೆ. 

ADVERTISEMENT

ಲಂಚ ಪಡೆದ ಆರೋಪದ ಮೇಲೆ ಕೋರ್ಟ್‌ ರೂಂನಿಂದಲೇ ಮ್ಯಾಜಿಸ್ಟೇಟ್‌ ಒಬ್ಬರನ್ನು ಬಂಧಿಸಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.

ಸಸಾರಾಂ ಗ್ರಾಮದ ಭೂವಿವಾದ ಸಂಬಂಧ ಅರ್ಜಿ ಸಲ್ಲಿಸಿದ್ದ ಶಕುಂತಲಾ ದೇವಿ ಪರ ತೀರ್ಪು ನೀಡಲು ಮ್ಯಾಜಿಸ್ಟ್ರೇಟ್‌ ಜಿ.ಕೆ. ರಾಮ್‌ ₹10 ಸಾವಿರ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು.

**

ಆಕಳು, ಮೇಕೆ ಲಂಚ!

ಈ ಮೊದಲು ಇದೇ ಮಹಿಳೆಯಿಂದ ₹40 ಸಾವಿರ ಬೆಲೆ ಬಾಳುವ ಆಕಳು ಮತ್ತು ₹8 ಸಾವಿರ ಬೆಲೆ ಬಾಳುವ ಮೇಕೆಯನ್ನು ಮ್ಯಾಜಿಸ್ಟ್ರೇಟ್‌ ಲಂಚವಾಗಿ ಪಡೆದಿದ್ದರು.

ನಂತರ ಮತ್ತೆ ₹10 ಸಾವಿರ ಲಂಚದ ಬೇಡಿಕೆಯಿಂದ ರೋಸಿಹೋದ ಆ ಬಡ ಮಹಿಳೆ ಜಾಗೃತ ದಳಕ್ಕೆ ದೂರು ನೀಡಿದ್ದರು.

ಜಾಗೃತ ದಳದ ಸಿಬ್ಬಂದಿ ಸೂಚನೆಯಂತೆ ₹10 ಸಾವಿರ ಹಣದೊಂದಿಗೆ ಕಚೇರಿಗೆ ತೆರಳಿದ್ದ ಮಹಿಳೆಯಿಂದ ಲಂಚ ಸ್ವೀಕರಿಸುವಾಗ ಮ್ಯಾಜಿಸ್ಟ್ರೇಟ್‌ ಬಲೆಗೆ ಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.