ADVERTISEMENT

ಲಂಚ ಹಗರಣ: ನ್ಯಾಯಮೂರ್ತಿ ನಿರ್ಮಲ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST

ಚಂಡೀಗಡ, (ಪಿಟಿಐ): ಮೂರು ವರ್ಷಗಳ ಹಿಂದೆ ದೇಶದ ಗಮನ ಸೆಳೆದಿದ್ದ ವಿವಾದಾತ್ಮಕ ‘ನ್ಯಾಯಾಧೀಶರ ಮನೆ ಬಾಗಿಲಿಗೆ ಹಣ’ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಿರ್ಮಲ ಯಾದವ್ ಮತ್ತು ಇತರ ನಾಲ್ವರ ವಿರುದ್ಧ ಸಿಬಿಐ ಶುಕ್ರವಾರ ದೋಷಾರೋಪಣ ಪಟ್ಟಿ ಸಲ್ಲಿಸಿತು. ಭಾರತೀಯ ದಂಡ ಸಂಹಿತೆ 120-ಬಿ ರ ಅನ್ವಯ ‘ಸಂಚು’ ಮತ್ತು ಕಲಂ 11 ಮತ್ತು 12ರ ‘ಭ್ರಷ್ಟಾಚಾರ ತಡೆ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡ 25 ಪುಟಗಳ ಆರೋಪಪಟ್ಟಿಯನ್ನು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾಯಿತು.

ನ್ಯಾಯಾಲಯ ಏಪ್ರಿಲ್ 6ರಂದು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ ಅವರ ಅನುಮತಿ ದೊರೆತ ನಂತರ ಮಹಿಳಾ ನ್ಯಾಯಮೂರ್ತಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ರಾಷ್ಟ್ರಪತಿಗಳ ಮೂರು ಪುಟದ ಒಪ್ಪಿಗೆ ಪತ್ರವನ್ನು ದೋಷಾರೋಪಣೆ ಪಟ್ಟಿಯೊಂದಿಗೆ ಸಿಬಿಐ ಲಗತ್ತಿಸಿದೆ.

ಯಾದವ್ ವಿರುದ್ಧ ಸಾಕ್ಷ್ಯ ನಾಶ ಮತ್ತು ಸುಳ್ಳು ಸಾಕ್ಷ್ಯ ಸಿದ್ಧಪಡಿಸುವ ಗುರುತರವಾದ ಆರೋಪಗಳನ್ನು ಮಾಡಲಾಗಿದೆ. ಹರ್ಯಾಣದ ಮಾಜಿ ಅಡ್ವೋಕೇಟ್ ಜನರಲ್ ಸಂಜೀವ ಬನ್ಸಾಲ್, ದೆಹಲಿ ಮೂಲದ ವರ್ತಕ ರವೀಂದರ್ ಸಿಂಗ್, ನಿರ್ಮಲ್ ಸಿಂಗ್ ಮತ್ತು ರಾಜೀವ್ ಅವರ ವಿರುದ್ಧವೂ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.ಹಗರಣ ನಡೆದಾಗ (2008) ನಿರ್ಮಲ ಯಾದವ್ ಪಂಜಾಬ್-ಹರ್ಯಾಣ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿದ್ದರು.

ಅವರಿಗೆ ಕೊಡಬೇಕಿದ್ದ 15 ಲಕ್ಷ ರೂಪಾಯಿ ಹಣವನ್ನು ತಪ್ಪಿ ಅದೇ ಹೆಸರಿನ ಮತ್ತೊಬ್ಬ ಮಹಿಳಾ ನ್ಯಾಯಮೂರ್ತಿ ನಿರ್ಮಲ್ ಜಿತ್ ಕೌರ್ ಅವರ ಮನೆಗೆ ತಲುಪಿಸಲಾಗಿತ್ತು. ಅವರು ಈ ವಿಷಯವಾಗಿ ಚಂಡೀಗಡ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಸಂಜೀವ್ ಬನ್ಸಾಲ್ ಅವರ ಗುಮಾಸ್ತ ಪ್ರಕಾಶ ರಾಮ್ ಎಂಬ ವ್ಯಕ್ತಿ ಹಣವನ್ನು ನ್ಯಾಯಮೂರ್ತಿಗಳ ಮನೆಗೆ ತಲುಪಿಸಿದ್ದ.ಆದರೆ, ತಮ್ಮ ಮೇಲಿನ ಆರೋಪವನ್ನು ಯಾದವ್ ಅವರು ನಿರಾಕರಿಸಿದ್ದರು. ಹಗರಣ ಬೆಳಕಿಗೆ ಬಂದ ಮೇಲೆ ಅವರನ್ನು ರಜೆಯ ಮೇಲೆ ಕಳುಹಿಸಲಾಗಿತ್ತು. ನಂತರ ಉತ್ತರಾಂಚಲ ಹೈಕೋರ್ಟ್‌ಗೆ ವರ್ಗ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.