ADVERTISEMENT

ಲಕ್ಷದ್ವೀಪ ಬಳಿ ಹಡಗಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST
ಬೆಂಕಿಗೆ ಆಹುತಿಯಾಗಿರುವ ಹಡಗು
ಬೆಂಕಿಗೆ ಆಹುತಿಯಾಗಿರುವ ಹಡಗು   

ಮುಂಬೈ: ಲಕ್ಷದ್ವೀಪದ ಬಳಿಯ ಅರಬ್ಬಿ ಸಮುದ್ರದಲ್ಲಿ ಮಾರ್ಸಕ್ ಹೊನಮ್‌ ಎನ್ನುವ ವಾಣಿಜ್ಯ ಹಡಗಿನಲ್ಲಿ ಮಂಗಳವಾರ ರಾತ್ರಿ ಭಾರಿ ಅಗ್ನಿ ಅನಾಹುತ ಸಂಭವಿಸಿದೆ.

13 ಭಾರತೀಯರು ಸೇರಿದಂತೆ 27 ಸಿಬ್ಬಂದಿ ಹಡಗಿನಲ್ಲಿದ್ದರು. ನಾಲ್ವರು ನಾಪತ್ತೆಯಾಗಿದ್ದು, ಉಳಿದವರನ್ನು ರಕ್ಷಿಸಲಾಗಿದೆ.

330 ಮೀಟರ್‌ ಉದ್ದದ ಹಡಗು ಮಾರ್ಚ್‌ 1ರಂದು ಸಿಂಗಪುರದಿಂದ ಹಿಂತಿರುಗುತ್ತಿತ್ತು. ಹಡಗಿನಲ್ಲಿ ಸ್ಫೋಟ ಸಹ ಸಂಭವಿಸಿದ್ದು, ಬೆಂಕಿಯ ಜ್ವಾಲೆಗಳು 25 ಮೀಟರ್‌ ಎತ್ತರದವರೆಗೆ ವ್ಯಾಪಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮಂಗಳವಾರ ರಾತ್ರಿ 9.45ರ ಸುಮಾರಿಗೆ ಇಲ್ಲಿನ ಕರಾವಳಿ ಪಡೆಯ ರಕ್ಷಣಾ ಕೇಂದ್ರಕ್ಕೆ ಘಟನೆ ಬಗ್ಗೆ ಮಾಹಿತಿ ದೊರೆಯಿತು. ತಕ್ಷಣವೇ ಉಪಗ್ರಹ ಆಧಾರಿತ ಸಂವಹನ ಜಾಲದ ಮೂಲಕ ರಕ್ಷಣೆಗೆ ಧಾವಿಸುವಂತೆ ಇತರ ವಾಣಿಜ್ಯ ಹಡಗುಗಳಿಗೆ ಮಾಹಿತಿ ನೀಡಲಾಯಿತು ಎಂದು ಅವರು ತಿಳಿಸಿದ್ದಾರೆ.

ಈ ಹಡಗು ಲಕ್ಷದ್ವೀಪದ ಅಗಟ್ಟಿಯಿಂದ 570 ಕಿಲೋ ಮೀಟರ್‌ (340 ನಾಟಿಕಲ್‌ ಮೈಲ್‌) ದೂರದಲ್ಲಿದ್ದು, ಕರಾವಳಿ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಜತೆಗೆ ಲಕ್ಷದ್ವೀಪದಲ್ಲಿ ಗಸ್ತಿನಲ್ಲಿರುವ ಹಡಗುಗಳನ್ನು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗಿದೆ.

‘ನಾಪತ್ತೆಯಾಗಿರುವ ನಾಲ್ವರನ್ನು ರಕ್ಷಿಸಲು ಆದ್ಯತೆ ನೀಡಲಾಗಿದೆ. ಜತೆಗೆ, ವಿಶೇಷ ಹಡಗುಗಳನ್ನು ನಿಯೋಜಿಸುವ ಮೂಲಕ ಬೆಂಕಿಗೆ ಆಹುತಿಯಾಗಿರುವ ಹಡಗನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಕರಾವಳಿ ಪಡೆ ಕಮಾಂಡರ್‌ ಇನ್‌ಸ್ಪೆಕ್ಟರ್‌ ಜನರಲ್‌  ಕೆ.ಆರ್‌.ನೌಟಿಯಾಲ್‌ ತಿಳಿಸಿದ್ದಾರೆ.

‘ಎಂವಿ ಆಲ್ಸ್‌ ಸಿಸಿರೊ’ ಎನ್ನುವ ವಾಣಿಜ್ಯ ಹಡಗು ಮಾರ್ಸಕ್‌ ಹಡಗಿನ ಬಳಿ ರಾತ್ರಿ 11.25ರ ಸುಮಾರಿಗೆ ತೆರಳಿದ್ದು, 23 ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಹಡಗಿನಲ್ಲಿ ಫಿಲಿಪ್ಪೀನ್ಸ್‌ನ ಒಂಬತ್ತು, ರೊಮೇನಿಯಾದ ಒಬ್ಬರು, ದಕ್ಷಿಣ ಆಫ್ರಿಕಾದ ಒಬ್ಬರು, ಥಾಯ್ಲೆಂಡ್‌ನ ಇಬ್ಬರು ಮತ್ತು ಅಮೆರಿಕದ ಒಬ್ಬರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.