ADVERTISEMENT

ಲಡಾಖ್‌ ಸರೋವರದಲ್ಲಿ ಟಿಬೆಟ್‌ ಮುಖ್ಯಸ್ಥನಿಗೆ ಪ್ರಾರ್ಥನೆಗೆ ಅವಕಾಶ

ಪಿಟಿಐ
Published 6 ಜುಲೈ 2017, 20:29 IST
Last Updated 6 ಜುಲೈ 2017, 20:29 IST
ಪಾಂಗ್‌ ಗಾಂಗ್‌ ಸರೋವರದ ದಡದಲ್ಲಿ ನಡೆದ ಪ್ರಾರ್ಥನೆ
ಪಾಂಗ್‌ ಗಾಂಗ್‌ ಸರೋವರದ ದಡದಲ್ಲಿ ನಡೆದ ಪ್ರಾರ್ಥನೆ   

ಪಾಂಗ್‌ ಗಾಂಗ್‌, ಲಡಾಖ್‌: ಚೀನಾದ ಜತೆಗೆ ಗಡಿ ವಿವಾದ ಇರುವ ಪಾಂಗ್‌ ಗಾಂಗ್‌ ಸರೋವರ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಟಿಬೆಟ್‌ನ ದೇಶಾಂತರ ಸರ್ಕಾರದ ಅಧ್ಯಕ್ಷ ಲಾಬ್‌ಸಾಂಗ್‌ ಸಾಂಗೇ ಅವರಿಗೆ ಭಾರತ ಅವಕಾಶ ನೀಡಿದೆ. ಟಿಬೆಟ್‌ ಧರ್ಮಗುರು ದಲೈಲಾಮಾ ಅವರ ಹುಟ್ಟುಹಬ್ಬದ (ಗುರುವಾರ) ನಿಮಿತ್ತ ಅದರ ಮುನ್ನಾದಿನ ಈ ಪ್ರಾರ್ಥನೆ ನಡೆದಿದೆ.


ಅಲ್ಲಿನ ಪಾಂಗ್‌ ಗಾಂಗ್‌ ಸರೋವರದ ದಡದಲ್ಲಿ ಅವರು ಬುಧವಾರ ಪ್ರಾರ್ಥನೆ ಮಾಡಿದ್ದಾರೆ. ಈ ಸರೋವರ ಭಾರತ–ಚೀನಾ ನಡುವಣ ನೈಜ ನಿಯಂತ್ರಣ ರೇಖೆಯಲ್ಲಿಯೇ (ಎಲ್‌ಎಸಿ) ಇದೆ.

ಎಲ್‌ಎಸಿ ಬಗ್ಗೆಯೇ ಭಾರತ ಮತ್ತು ಚೀನಾ ನಡುವೆ ವಿವಾದ ಇದೆ. ಸರೋವರದ ಪೂರ್ವದ ಕೊನೆಗೆ ಟಿಬೆಟ್‌ ಇದೆ. ಸರೋವರದ ಕೆಲವು ಭಾಗಗಳನ್ನು ಚೀನಾ ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿದೆ ಎಂಬುದು ಭಾರತದ ವಾದ. 1962ರ ಭಾರತ–ಚೀನಾ ಯುದ್ಧದ ಸಂದರ್ಭದಲ್ಲಿ ಈ ಸರೋವರದ ದಡದಲ್ಲಿಯೂ ಕಾದಾಟ ನಡೆದಿತ್ತು.

ಈ ಸರೋವರದಲ್ಲಿ ದೋಣಿಯಲ್ಲಿ ಬರುವ ಚೀನಾ ಸೈನಿಕರು ಭಾರತದ ವಶದಲ್ಲಿರುವ ಪ್ರದೇಶಕ್ಕೂ ಬರುತ್ತಾರೆ. ಇದು ಆಗಾಗ ಸಂಘರ್ಷಕ್ಕೂ ಕಾರಣವಾಗುತ್ತಿದೆ. ಲಡಾಖ್‌ನಲ್ಲಿ 38 ಸಾವಿರ ಚ. ಕಿ.ಮೀ ಪ್ರದೇಶವನ್ನು ಚೀನಾ ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿದೆ ಎಂದು ಭಾರತ ಆರೋಪಿಸುತ್ತಿದೆ.

ಸಿಕ್ಕಿಂ ವಲಯದಲ್ಲಿ ಭಾರತ–ಚೀನಾ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಏಪ್ರಿಲ್‌ನಲ್ಲಿ ಅರುಣಾಚಲ ಪ್ರದೇಶಕ್ಕೆ ದಲೈಲಾಮಾ ಅವರು ಭೇಟಿ ನೀಡಿರುವುದೇ ಕಾರಣ ಎನ್ನಲಾಗುತ್ತಿದೆ.  ಅರುಣಾಚಲ ಪ್ರದೇಶದಲ್ಲಿ ಭಾರತ–ಚೀನಾ ಎಲ್‌ಎಸಿ ಸಮೀಪದ ತವಾಂಗ್‌ಗೆ ಭೇಟಿ ನೀಡಲು ದಲೈಲಾಮಾ ಅವರಿಗೆ ಭಾರತ ಸರ್ಕಾರ ಅವಕಾಶ ಮಾಡಿ ಕೊಟ್ಟಿತ್ತು. ಇದು ಚೀನಾದ ಆಕ್ರೋಶಕ್ಕೆ ಕಾರಣವಾಗಿತ್ತು.

ಹಾಗಾಗಿ ಪಾಂಗ್‌ ಗಾಂಗ್‌ ಸರೋವರಕ್ಕೆ ಸಾಂಗೇ ಅವರ ಭೇಟಿ ಸಂಘರ್ಷವನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.