ADVERTISEMENT

ಲೈಂಗಿಕ ದೌರ್ಜನ್ಯ ನಿಯಂತ್ರಣ ಮಸೂದೆ: ಮನೆ ಕೆಲಸದವರ ಸೇರ್ಪಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2011, 17:55 IST
Last Updated 13 ಮಾರ್ಚ್ 2011, 17:55 IST

ನವದೆಹಲಿ (ಪಿಟಿಐ): ಹೊಸದಾಗಿ ರೂಪಿಸಲಾಗಿರುವ ‘ದುಡಿಯುವ ಮಹಿಳೆಯರ ಮೇಲೆ ಕೆಲಸದ ಜಾಗದಲ್ಲಿ ನಡೆಯುವ ಲೈಂಗಿಕ ಕಿರುಕುಳ ನಿಯಂತ್ರಣ ಮಸೂದೆ’ ವ್ಯಾಪ್ತಿಗೆ ಮನೆ ಕೆಲಸದ ನೌಕರರನ್ನೂ  ಸೇರಿಸಬೇಕು ಎಂದು 11 ಮಂದಿ ಮಹಿಳಾ ಸಂಸದರು  ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಹಿಳಾ ಸಂಸದರ ಬೇಡಿಕೆಗೆ ರಾಷ್ಟ್ರೀಯ ಮಹಿಳಾ ಆಯೋಗವೂ ಬೆಂಬಲ ಸೂಚಿಸಿದೆ. ಈ ಮಸೂದೆಯಲ್ಲಿ ಮನೆಕೆಲಸದ ಮಹಿಳೆಯರು ಒಳಗೊಳ್ಳದಿರಲು ಪ್ರಮುಖ ಕಾರಣವೆಂದರೆ, ಇವರು ಕಾರ್ಮಿಕರು ಎಂಬ ವ್ಯಾಖ್ಯಾನದ ವ್ಯಾಪ್ತಿಗೆ ಸೇರಿಲ್ಲ  ಎಂಬುದಾಗಿದೆ. ಇದು ತಪ್ಪು. ದೇಶದಾದ್ಯಂತ ಹಲವು ಲಕ್ಷ ಸಂಖ್ಯೆಯಲ್ಲಿ ಇರುವ ಮನೆ ಕೆಲಸದ ಮಹಿಳಾ ನೌಕರರ ಮೇಲೆ ವ್ಯಾಪಕವಾಗಿ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಆದರೆ ತೀರಾ ನೊಂದಿರುವ ಈ ದುಡಿಯುವ ಮಹಿಳೆಯರನ್ನು ಮಸೂದೆಯಲ್ಲಿ ಸೇರಿದೇ ಇರುವ ಬಗ್ಗೆ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮನೆಕೆಲಸದ ಮಹಿಳಾ ಕಾರ್ಮಿಕರನ್ನು ಮಸೂದೆಯ ವ್ಯಾಪ್ತಿಯಲ್ಲಿ ಸೇರಿಸದೆ ಇರುವುದು ಗಂಭೀರ ದೋಷವಾಗಿದೆ. ಈ ಬಗ್ಗೆ  ತಿದ್ದುಪಡಿ ಮಾಡಬೇಕು ಎಂದು ಬಲವಾಗಿ ಒತ್ತಾಯಿಸುತ್ತೇನೆ ಎಂದು ಸಿಪಿಎಂನ ಬೃಂದಾ ಕಾರಟ್ ತಿಳಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಗಿರಿಜಾ ವ್ಯಾಸ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಸಂಸತ್ತಿನಲ್ಲಿ ಮಸೂದೆ ಚರ್ಚೆಗೆ ಬಂದಾಗ ಮನೆ ಕೆಲಸದವರ ಸೇರ್ಪಡೆಗಾಗಿ ಒತ್ತಾಯಿಸುತ್ತೇವೆ. ಅವರನ್ನು ಕೈಬಿಡಲು ಕಾರಣವೇನು ಎಂದು ತಿಳಿಯಬೇಕಿದೆ’ ಎಂದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವರಾದ ಕೃಷ್ಣಾ ತೀರತ್ ಕೂಡ ಮನೆಕೆಲಸದ ಮಹಿಳೆಯರನ್ನು ಹೊಸ ಮಸೂದೆಯಲ್ಲಿ ಸೇರ್ಪಡೆ ಮಾಡಬೇಕು ಎಂದು ಲಿಖಿತವಾಗಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.