ADVERTISEMENT

ಲೋಕಪಾಲ:ಹಜಾರೆ ತಂತ್ರ ಸಂವಿಧಾನ ಬಾಹಿರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ಮುಂಬೈ (ಪಿಟಿಐ): `ಸಂಸತ್ತಿನಲ್ಲಿ ಲೋಕಪಾಲ ಮಸೂದೆ ಅಂಗೀಕಾರಕ್ಕಾಗಿ ಅಣ್ಣಾ ತಂಡ ಅನುಸರಿಸುತ್ತಿರುವ ಒತ್ತಡ ತಂತ್ರ ಸಂವಿಧಾನ ಬಾಹಿರ~ ಎಂದು ದಲಿತ ಪ್ಯಾಂಥರ್‌ನ ಹಿರಿಯ ನಾಯಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಾಮದೇವ್ ಧಸಾಲ್ ಹೇಳಿದ್ದಾರೆ.

`ಅಣ್ಣಾ ತಂಡಕ್ಕೆ ಸಂವಿಧಾನದಲ್ಲಿ ವಿಶ್ವಾಸ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸಲು ಅವರು ಬಲವಂತ ಮಾಡುತ್ತಿದ್ದಾರೆ~ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಭ್ರಷ್ಟಾಚಾರ ವಿರೋಧಿ ಆಂದೋಲನ ಹುಟ್ಟು ಹಾಕುವಲ್ಲಿ ಅಣ್ಣಾ ಯಾವುದೇ ತಪ್ಪು ಮಾಡಿಲ್ಲ. ಭ್ರಷ್ಟಾಚಾರ ಕೊನೆಗಾಣಿಸುವುದೇ ಎಲ್ಲರ ಆಶಯ.  ಆದರೆ ಪ್ರಧಾನ ಮಂತ್ರಿ ಮತ್ತು ಕೆಳ ಹಂತದ ಅಧಿಕಾರಶಾಹಿಯನ್ನು ಲೋಕಪಾಲ ವ್ಯಾಪ್ತಿಗೆ ತರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ನಮ್ಮ ನಿಯೋಗವು ರಾಷ್ಟ್ರಪತಿ, ಪ್ರಧಾನಿ ಮತ್ತು ಗೃಹ ಸಚಿವರನ್ನು ಭೇಟಿಯಾಗಿ ಅಣ್ಣಾ ತಂಡದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಒತ್ತಾಯಿಸಲಿದೆ~ ಎಂದೂ ಅವರು ಪ್ರಕಟಿಸಿದರು.

ಅಣ್ಣಾ ತಂಡ ಮತ್ತು ಲೋಕಪಾಲ ಮಸೂದೆ ವಿರುದ್ಧ ತಮ್ಮ ಸಂಘಟನೆ ಹೋರಾಟ ಮುಂದುವರಿಸಲಿದ್ದು, ಜನವರಿ 11ರಂದು ಪುಣೆಯಲ್ಲಿ ಬೃಹತ್ ಆಂದೋಲನ ನಡೆಯಲಿದೆ ಎಂದು ನಾಮದೇವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.