ADVERTISEMENT

ಲೋಕಪಾಲ್‌ಮಸೂದೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 19:30 IST
Last Updated 27 ಫೆಬ್ರುವರಿ 2011, 19:30 IST

ನವದೆಹಲಿ (ಪಿಟಿಐ): ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿಯು  ಲೋಕಪಾಲ್ ಮಸೂದೆಯ ಕರಡನ್ನು ಪರಿಶೀಲಿಸಿ ತನ್ನ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ರಾಷ್ಟ್ರೀಯ ಸಲಹಾ ಮಂಡಳಿಯ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದ ಸಚಿವರ ತಂಡವು ಶನಿವಾರ ಸಭೆ ಸೇರಿ ಲೋಕಪಾಲ ಮಸೂದೆಯನ್ನು ಪರಿಶೀಲಿಸಲು ನಿರ್ಧರಿಸಿದೆ.

ಪ್ರಣವ್ ಮುಖರ್ಜಿ ನೇತೃತ್ವದ ಸಚಿವರ ತಂಡವು ಮಸೂದೆಯಲ್ಲಿ ಪರಿಣಾಮಕಾರಿ ಅಂಶಗಳನ್ನು ಸೇರಿಸುವ ಬಗ್ಗೆ ಚಿಂತನೆ ನಡೆಸಿದ್ದು, ಭ್ರಷ್ಟಾಚಾರವನ್ನು ನಿಯಂತ್ರಿಸಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೋನಿಯಾ ಗಾಂಧಿ ಅವರು ಸೂಚನೆ ನೀಡಿದ್ದಾರೆ. ಸಂಪುಟ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಕಾರ್ಯದರ್ಶಿಗಳ ಸಮಿತಿ ಸಹ ಲೋಕಪಾಲ ಮಸೂದೆಯ ಕರಡನ್ನು ಪರಿಶೀಲನೆ ಮಾಡುತ್ತಿದೆ.

ಕಳೆದ 22ರಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಜಾರಿಗೆ ತರಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದರು. ಲೋಕಪಾಲ್ ಮಸೂದೆ ಸಿದ್ಧವಾಗಿ ಬಹಳ ದಿನಗಳೇ ಆದರೂ ಅದರ ಮುಂದಿನ ಕ್ರಮಗಳು ನಿಧಾನವಾಗಿ ಸಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಭ್ರಷ್ಟಾಚಾರ ಪ್ರಕರಣಗಳು ಬಯಲಿಗೆ ಬಂದ ನಂತರ ಸಾರ್ವಜನಿಕರು ಲೋಕಪಾಲ್ ಮಸೂದೆಯನ್ನು ಆದಷ್ಟು ಬೇಗ ಸಂಸತ್ತಿನಲ್ಲಿ ಮಂಡಿಸಿ ಅಂಗೀಕರಿಸುವಂತೆ ಒತ್ತಡ ಹೇರುತ್ತಿರುವುದರಿಂದ ಸರ್ಕಾರ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಮಾನವ ಹಕ್ಕುಗಳ ಪ್ರತಿಪಾದಕರಾದ ಅಣ್ಣಾ ಹಜಾರೆ, ಸ್ವಾಮಿ ಅಗ್ನಿವೇಶ್, ಕಿರಣ್ ಬೇಡಿ ಮತ್ತು ಅರವಿಂದ್ ಕೆಜ್ರಿವಾಲ ಮುಂತಾದವರು ಈಗ ಸಿದ್ಧಪಡಿಸಿರುವ  ಲೋಕಪಾಲ್ ಮಸೂದೆಯು ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಂಶಗಳನ್ನು ಒಳಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಸೂದೆಯ ಕರಡನ್ನು ತಿದ್ದುಪಡಿ ಮಾಡಬೇಕಾಗಿದ್ದು, ಅದಕ್ಕೆ ಸಮಿತಿಯನ್ನು ರಚಿಸಬೇಕು, ಆ ಸಮಿತಿಯ ಸದಸ್ಯರಲ್ಲಿ ಅರ್ಧದಷ್ಟು ಜನರು ಸಮಾಜದ ವಿವಿಧ ವರ್ಗಗಳಿಗೆ ಸೇರಿದವರಾಗಿರಬೇಕು ಎಂದು ಈ ಗಣ್ಯರು ಒತ್ತಾಯಿಸಿದ್ದಾರೆ.

ಅಣ್ಣಾ ಹಜಾರೆ ಉಪವಾಸ ಬೆದರಿಕೆ
ನವದೆಹಲಿ (ಐಎಎನ್‌ಎಸ್): ಮಾರ್ಚ್ ಅಂತ್ಯದ ವೇಳೆಗೆ ಲೋಕಪಾಲ್ ಕಾಯ್ದೆ ಅಥವಾ ಭ್ರಷ್ಟಾಚಾರ ವಿರೊಧಿ ಕಾಯ್ದೆಯನ್ನು ರೂಪಿಸಲು ಕ್ರಮ ತೆಗೆದುಕೊಳ್ಳದಿದ್ದರೆ ಏಪ್ರಿಲ್ 5ರಿಂದ ಅನಿರ್ಧಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ತಾವು ಪ್ರಧಾನಿ ಅವರಿಗೆ ಪತ್ರ ಬರೆದಿದ್ದು, ತಮ್ಮ ಬೇಡಿಕೆ ಈಡೇರದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುವುದು ಖಂಡಿತ ಎಂದು ಅವರು ವರದಿಗಾರರಿಗೆ ತಿಳಿಸಿದರು.

ಪರಿಣಾಮಕಾರಿಯಾದ ಲೋಕಪಾಲ್ ಕಾನೂನನ್ನು ರಚಿಸಲು ಸಮಿತಿಯನ್ನು ರಚಿಸಬೇಕು, ಈ ಸಮಿತಿಯಲ್ಲಿ ಅರ್ಧದಷ್ಟು ಸದಸ್ಯರು ಸಮಾಜದ ವಿವಿಧ ವರ್ಗದವರಾಗಬೇಕು ಎಂದು ಅವರು ಪತ್ರದಲ್ಲಿ ಸಲಹೆ ಮಾಡಿದ್ದಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಭ್ರಷ್ಟಾಚಾರ ವಿರುದ್ಧದ ಪರಿಣಾಮಕಾರಿ ಕಾನೂನನ್ನು ರಚಿಸಲು ಸಾಧ್ಯವೆ?. ಆದ್ದರಿಂದ ಸಮಿತಿಯಲ್ಲಿ ಸಮಾಜದ ವಿವಿಧ ವರ್ಗದ ಜನರ ಪ್ರಾತಿನಿಧ್ಯ ಇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.