ADVERTISEMENT

ಲೋಕಪಾಲ ಮಸೂದೆ: ಎಲ್ಲ ಪಕ್ಷಗಳೊಂದಿಗೆ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 23 ಮೇ 2012, 19:30 IST
Last Updated 23 ಮೇ 2012, 19:30 IST

ನವದೆಹಲಿ (ಪಿಟಿಐ): ಲೋಕಪಾಲ ಮಸೂದೆಯನ್ನು ರಾಜ್ಯಸಭೆ ಸಲಹಾ ಸಮಿತಿಗೆ ವಹಿಸುವ ಮುನ್ನ ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ. ಬನ್ಸಾಲ್ ಭರವಸೆ ನೀಡಿದ್ದಾರೆ.

ಲೋಕಪಾಲ ಮಸೂದೆ ಜಾರಿಗೆ ತರುವುದರ ಕುರಿತು ಸರ್ಕಾರ ಉತ್ಸುಕವಾಗಿದ್ದು, ಬಜೆಟ್ ಅಧಿವೇಶನದ ಕೊನೆಯ ದಿನವಾದ ಮಂಗಳವಾರವೂ ಸಹ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ ಮಸೂದೆ ಮಂಡನೆಗೆ ಇರುವ ದೊಡ್ಡ ತೊಂದರೆ ಎಂದರೆ ಸಾಕಷ್ಟು ತಿದ್ದುಪಡಿ ಮಾಡಬೇಕಿರುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾವು ನಿರೀಕ್ಷಿಸಿದ ರೀತಿಯಲ್ಲಿ ಲೋಕಪಾಲ ಮಸೂದೆ ಮಂಡನೆಯಾಗುತ್ತಿಲ್ಲ ಎಂಬ ಅಣ್ಣಾ ಹಜಾರೆ ತಂಡದ ಟೀಕೆಗೆ ಪ್ರತಿಕ್ರಿಯಿಸಿದ ಬನ್ಸಾಲ್, ದೊಂಬಿ ಪ್ರಭುತ್ವಕ್ಕೂ ಪ್ರಜಾಪ್ರಭುತ್ವಕ್ಕೂ ವ್ಯತ್ಯಾಸ ಇದ್ದೇ ಇರುತ್ತದೆ. ಆದರೆ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ ಮಾತ್ರ ನಾವು ಮಸೂದೆಯಲ್ಲಿ ಅವಕಾಶ ಕಲ್ಪಿಸುವುದಿಲ್ಲ ಎಂದರು.

ಎಲ್ಲ ರಾಜಕೀಯ ಪಕ್ಷಗಳ ಜತೆ ಸಮಾಲೋಚನೆ ನಡೆಸಿದ ನಂತರವೇ ಸಲಹಾ ಸಮಿತಿ ಸದಸ್ಯರ ಹೆಸರುಗಳನ್ನು ಬಹಿರಂಗಪಡಿಸಲಾಗುವುದು, ಈಗಾಗಲೆ ಬಿಜೆಪಿ ಮೂವರ ಹೆಸರನ್ನು ನೀಡಿದ್ದರೆ ಬಿಎಸ್‌ಪಿ, ಎಸ್‌ಪಿ, ಡಿಎಂಕೆ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳೂ ತಮ್ಮ ಪ್ರತಿನಿಧಿಯ ಹೆಸರನ್ನು ಸೂಚಿಸಿವೆ ಎಂದು ತಿಳಿಸಿದರು.

ಸರ್ಕಾರಕ್ಕೆ ಸಾಕಷ್ಟು ಜವಾಬ್ದಾರಿಗಳು ಇರುವ ಹಿನ್ನೆಲೆಯಲ್ಲಿ ಸಿಬಿಐ ಅನ್ನು ಲೋಕಪಾಲ ಮಸೂದೆ ವ್ಯಾಪ್ತಿಗೆ ಒಳಪಡಿಸುವುದು ಸಾಧ್ಯವಿಲ್ಲ ಎಂದು ಬನ್ಸಾಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.