ADVERTISEMENT

ಲೋಕಪಾಲ ಮಸೂದೆ ಶೀಘ್ರ: ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 20:10 IST
Last Updated 19 ಅಕ್ಟೋಬರ್ 2011, 20:10 IST

ಏರ್ ಇಂಡಿಯಾ ವಿಮಾನ (ಐಎಎನ್‌ಎಸ್): ಪರಿಣಾಮಕಾರಿ ಲೋಕಪಾಲಕ್ಕಾಗಿ ಶೀಘ್ರದಲ್ಲೇ ಮಸೂದೆ ತರಲಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ರಾತ್ರಿ ಭರವಸೆ ನೀಡಿದ್ದಾರೆ.
ಈ ನಿಟ್ಟಿನಲ್ಲಿ, ಅಣ್ಣಾ ಹಜಾರೆ ಅವರ ಚಳವಳಿಯ ಉದ್ದೇಶ ಈಡೇರಿದೆ ಎಂದು ಅವರು ಹೇಳಿದ್ದಾರೆ.

ಅಣ್ಣಾ ತಂಡದ ಸದಸ್ಯರ ಮೇಲೆ ಇತ್ತೀಚೆಗೆ ನಡೆದ ದಾಳಿಗಳನ್ನು ಖಂಡಿಸಿರುವ ಪ್ರಧಾನಿ, ಯಾರನ್ನೂ ವೈಯಕ್ತಿಕವಾಗಿ ಖಂಡಿಸಲು ಈ ಅವಕಾಶವನ್ನು ನಾನು ಬಳಸಿಕೊಳ್ಳುವುದಿಲ್ಲ ಎಂದು ಪ್ರಿಟೊರಿಯಾದಿಂದ ಹಿಂದಿರುಗುವ ಸಂದರ್ಭದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಪ್ರಜಾಪ್ರಭುತ್ವದಲ್ಲಿ ವಿಭಿನ್ನ ಅಭಿಪ್ರಾಯಕ್ಕೆ ಅವಕಾಶವಿದೆ, ಇಂತಹ ವಿಷಯಗಳಲ್ಲಿ ಹಿಂಸಾಚಾರಕ್ಕೆ ಸ್ಥಾನ ಇಲ್ಲ. ಈ ಬಗೆಯ ಘಟನೆಗಳು ಖಂಡನಾರ್ಹ.

ಹಿಂಸೆಯಿಂದ ಏನನ್ನೂ ಸಾಧಿಸಲಾಗದು. ಯಾರು ಎಷ್ಟೇ ಕೋಪಗೊಂಡಿರಲಿ ಅಥವಾ ಹತಾಶರಾಗಿರಲಿ ಅದನ್ನು ಹೊರಹಾಕಲು ಸಾಕಷ್ಟು ಬಗೆಯ ನಾಗರಿಕ ಮಾರ್ಗಗಳಿವೆ ಎಂದು ಹೇಳಿದರು. ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂಬ ಹೇಳಿಕೆಯನ್ನು ಅವರು ತಳ್ಳಿಹಾಕಿದರು.

ಅಡ್ವಾಣಿಗೆ ಸಲಹೆ: ರಥಯಾತ್ರೆ ನಡೆಸುತ್ತಿರುವ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರಿಂದ ಕಟು ಟೀಕೆಗೆ ಒಳಗಾಗುತ್ತಿರುವ ಪ್ರಧಾನಿ, `ಅಡ್ವಾಣಿ ಅವರು ಬಿರು ನುಡಿಗಳನ್ನು ಆಡಬಾರದು, ರಾಜಕೀಯದಲ್ಲಿ ಇಂತಹ ಮಾತುಗಳು ಸಲ್ಲದು~ ಎಂದರು.

ರಥಯಾತ್ರೆ ಯಶಸ್ವಿಯಾಗಲಿ ಎಂದ ಅವರು, ಅಡ್ವಾಣಿ ಅವರಿಗೆ ಪ್ರಧಾನಿಯಾಗುವ ಸಾಮರ್ಥ್ಯ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಅದನ್ನು ಈ ದೇಶದ ಜನ ನಿರ್ಧರಿಸಬೇಕು, ವಿದೇಶಿ ನೆಲದಲ್ಲಿ ನಾನು ನಮ್ಮ ದೇಶದ ಯಾವ ನಾಯಕನನ್ನೂ ಟೀಕಿಸಲಾರೆ ಎಂದರು.

ದುರ್ಬಲ ಪ್ರಧಾನಿ ಎಂದು ಮಂಗಳವಾರ ಸಿಂಗ್ ಅವರನ್ನು ಟೀಕಿಸಿದ್ದ ಅಡ್ವಾಣಿ, ಅವರ ಬಗ್ಗೆ ನನಗೆ ಅನುಕಂಪ ಇದೆ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.