ADVERTISEMENT

ಲೋಕಪಾಲ ಮಸೂದೆ: ಸ್ಥಾಯಿ ಸಮಿತಿಗೆ ಅಗ್ನಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ನವದೆಹಲಿ, (ಪಿಟಿಐ): ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಧಿಕಾರದ ಬಗ್ಗೆ ಸಿವಿಸಿ ಮತ್ತು ಸಿಬಿಐ ವಿಭಿನ್ನವಾದ ಬೇಡಿಕೆ ಮಂಡಿಸುವ ಸಾಧ್ಯತೆಗಳು ಇರುವುದರಿಂದ ಲೋಕಪಾಲ ಮಸೂದೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಮುಂದಿನ ವಾರ ಕ್ಲಿಷ್ಟಕರ ಸನ್ನಿವೇಶವನ್ನು ಎದುರಿಸಬೇಕಾಗಿದೆ.

ಕಾನೂನು, ನ್ಯಾಯಾಂಗ, ಸಿಬ್ಬಂದಿ ಮತ್ತು ಕುಂದುಕೊರತೆಗೆ ಸಂಬಂಧಿಸಿದ ಸ್ಥಾಯಿ ಸಮಿತಿಯನ್ನು ಮೂರು ದಿನಗಳ ಹಿಂದೆ ಪುನರ್‌ರಚಿಸಲಾಗಿದ್ದು, ಸಮಿತಿಯ ಅಧ್ಯಕ್ಷ ಅಭಿಶೇಕ್ ಸಿಂಘ್ವಿ ಅವರು ಈ ತಿಂಗಳ 23 ಮತ್ತು 24ರಂದು ಪುನರ್‌ರಚಿತ ಸಮಿತಿಯ ಮಹತ್ವದ ಸಭೆಯನ್ನು ಕರೆದಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ವರದಿಯನ್ನು ಸಲ್ಲಿಸಲು ಸ್ಥಾಯಿ ಸಮಿತಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಪ್ರಬಲ ಲೋಕಪಾಲ ಮಸೂದೆ ರಚನೆ, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ಸರ್ಕಾರಿ ಪ್ರತಿನಿಧಿಗಳ ಮಧ್ಯೆಯ ಭಿನ್ನಾಭಿಪ್ರಾಯ ಬಗೆಹರಿಸುವ ಮಹತ್ತರವಾದ ಜವಾಬ್ದಾರಿ ಸ್ಥಾಯಿ ಸಮಿತಿಯ ಮೇಲಿದೆ.

ಸರ್ಕಾರ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಪಾಲ ಮಸೂದೆಯನ್ನು ಮಂಡಿಸಿದ್ದು, ನಾಗರಿಕ ಸಮಾಜದ ಪ್ರತಿನಿಧಿಗಳು ಇನ್ನೂ ಕೆಲವು ವಿಶಿಷ್ಟ ಅಂಶಗಳುಳ್ಳ ಜನಲೋಕಪಾಲ ಮಸೂದೆಗೆ ಒತ್ತಾಯಿಸಿದ್ದಾರೆ.

ಆದರೆ ಸರ್ಕಾರ ಈ ಬೇಡಿಕೆಗೆ ಸಕಾರಾತ್ಮಕ ಧೋರಣೆ ಹೊಂದಿಲ್ಲ. 22 ಮತ್ತು 23ರಂದು ನಡೆಯುವ ಸಭೆಯ ಮುಂದೆ ಸಿಬಿಐ, ಸಿವಿಸಿಯಲ್ಲದೆ ಸಾಮಾಜಿಕ ಕಾರ್ಯಕರ್ತೆ ಅರುಣಾ ರಾಯ್, ಖ್ಯಾತ ನ್ಯಾಯವಾದಿ ಹರಿಶ್ ಸಾಳ್ವೆ ಮತ್ತು ದಲಿತ ಮುಖಂಡ ಉದಿತ್ ರಾಜ್ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.

31 ಸದಸ್ಯರ ಸಮಿತಿಯಲ್ಲಿ ರಾಮ್‌ಜೇಠ್ಮಲಾನಿ (ಬಿಜೆಪಿ), ವಿಜಯ್ ಬಹದ್ದೂರ್ (ಬಿಎಸ್‌ಪಿ),  ಮನಿಶ್ ತಿವಾರಿ ಮತ್ತು ಶಾಂತಾರಾಂ ನಾಯ್ಕ (ಕಾಂಗ್ರೆಸ್), ಲಾಲೂ ಪ್ರಸಾದ್, ರಾಮ್ ವಿಲಾಸ್ ಪಾಸ್ವಾನ್ ಮತ್ತು ಅಮರ್ ಸಿಂಗ್ ಸೇರಿದಂತೆ ಅನೇಕ ಪ್ರಮುಖ ಮುಖಂಡರಿದ್ದಾರೆ. ಸಮಿತಿಯು ಈಗಾಗಲೇ ಅಣ್ಣಾ ಹಜಾರೆ ತಂಡದ ವಾದವನ್ನು ಆಲಿಸಿದೆ. ಈ ವಿಚಾರದಲ್ಲಿ ಆಸಕ್ತಿ ಉಳ್ಳ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳಿಗೂ ಅಭಿಪ್ರಾಯ ಮಂಡಿಸಲು ಅವಕಾಶವಿದೆ.

ಸರ್ಕಾರ ಈಗ ಸಂಸತ್ತಿನಲ್ಲಿ ಮಂಡಿಸಿರುವ ಮಸೂದೆಯಲ್ಲದೆ ಜನಲೋಕಪಾಲ ಮಸೂದೆ, ಅರುಣ್ ರಾಯ್ ಸಿದ್ಧಪಡಿಸಿರುವ ಮಸೂದೆಯನ್ನೂ ಸಮಿತಿ ಪರಿಶೀಲಿಸುತ್ತದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಲೋಕಪಾಲ ವ್ಯವಸ್ಥೆ ಜಾರಿಯಾದ ಮೇಲೆ ಸಿವಿಸಿ ಮತ್ತು ಸಿಬಿಐ ಅಧಿಕಾರ ವ್ಯಾಪ್ತಿ ಮೊಟಕಾಗಬಹುದು ಎಂಬುದು ಈ ಎರಡೂ ಸಂಸ್ಥೆಗಳ ಮುಖ್ಯಸ್ಥರ ಆತಂಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.