ADVERTISEMENT

ಲೋಕಸಭೆಯಲ್ಲಿ ಪ್ರತಿಧ್ವನಿಸಿದ ತೈಲ ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ ಹೆಚ್ಚಳ ಮಾಡಿರುವ ತೈಲ ಬೆಲೆ ಏರಿಕೆಯು ಬುಧವಾರ ಲೋಕಸಭೆಯಲ್ಲಿ ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

ಕೇಂದ್ರ ಸರ್ಕಾರದ ದುರ್ಬಲ ಆರ್ಥಿಕ ನೀತಿಯಿಂದಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ. ಇಂಧನ ಬೆಲೆ ಏರಿಕೆಯನ್ನು ಹಿಂಪಡೆಯಬೇಕೆಂದು ಎಂದು ಪ್ರತಿಪಕ್ಷದ ಸದಸ್ಯರು ಒತ್ತಾಯಿಸಿದರು.

ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡುವಂತೆ ಸ್ಪೀಕರ್ ಅವರನ್ನು ಕೆಲ ಸದಸ್ಯರು ಒತ್ತಾಯಿಸಿದರು. ನಿಲುವಳಿ ಸೂಚನೆಗೆ ನಿರಾಕರಿಸಿದ ಸ್ಪೀಕರ್ ಮೀರಾಕುಮಾರ್ ಅವರು, ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಕಲಾಪ ಆರಂಭವಾಗುತ್ತಿದ್ದಂತೆ ಸದನದಲ್ಲಿ ಎಡಪಕ್ಷದ ಸದಸ್ಯರು ಸ್ವೀಕರ್ ಆಸನದ ಬಳಿ ತೆರಳಿ ತೈಲ ಬೆಲೆ ಏರಿಕೆ ಕುರಿತು ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪ ಹೊತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಕೂಡ ಪ್ರತಿಭಟನೆ ನಡೆಸಿದರು.

ವಿವಿಧ ಪಕ್ಷಗಳ ಸದಸ್ಯರು ಸದನದ ಕಲಾಪಕ್ಕೆ ಅಡ್ಡಿ ಉಂಟು ಮಾಡಿದರೂ ಕಲಾಪ ಮುಂದುವರಿಯಿತು. ಇದೇ ವೇಳೆ ಮಾತನಾಡಿದ ಬಿಜೆಪಿಯ ಅನಂತಕುಮಾರ್, ರೂಪಾಯಿ ಮೌಲ್ಯ ತಡೆಗಟ್ಟುವಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪಿ.ಚಿದಂಬರಂ ವಿಫಲರಾಗಿದ್ದಾರೆ ಎಂದು ಆರೋಪಿಸಿದರಲ್ಲದೇ ತೈಲ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.