ADVERTISEMENT

ಲೋಕಸಭೆ ಕಲಾಪ ಮುಂದೂಡಿಕೆ: ಮಂಡನೆಯಾಗಿಲ್ಲ ಅವಿಶ್ವಾಸ ಗೊತ್ತುವಳಿ

ಏಜೆನ್ಸೀಸ್
Published 16 ಮಾರ್ಚ್ 2018, 10:10 IST
Last Updated 16 ಮಾರ್ಚ್ 2018, 10:10 IST
ಲೋಕಸಭೆಯಲ್ಲಿ ಪ್ರತಿಪಕ್ಷ ಸದಸ್ಯರಿಂದ ಗದ್ದಲ –ಪಿಟಿಐ ಚಿತ್ರ
ಲೋಕಸಭೆಯಲ್ಲಿ ಪ್ರತಿಪಕ್ಷ ಸದಸ್ಯರಿಂದ ಗದ್ದಲ –ಪಿಟಿಐ ಚಿತ್ರ   

ನವದೆಹಲಿ: ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಹಗರಣ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿ ಪ್ರತಿಪಕ್ಷಗಳ ಸದಸ್ಯರು ಗದ್ದಲ ಸೃಷ್ಟಿಸಿದ್ದರಿಂದಾಗಿ ಲೋಕಸಭೆ ಕಲಾಪವನ್ನು ಸೋಮವಾರದವರೆಗೆ ಮುಂದೂಡಲಾಗಿದೆ.

ಇದರೊಂದಿಗೆ, ಸತತ ಹತ್ತನೇ ದಿನವೂ ಲೋಕಸಭೆ ಕಲಾಪ ಗದ್ದಲಕ್ಕೆ ಬಲಿಯಾದಂತಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್ ಮತ್ತು ಟಿಡಿಪಿ ಮಂಡಿಸಲು ಉದ್ದೇಶಿಸಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಲಿಲ್ಲ.

‘ಸದನದಲ್ಲಿ ಕಲಾಪ ಕ್ರಮದ್ಧವಾಗಿರದ ಕಾರಣ ಅವಿಶ್ವಾಸ ಗೊತ್ತುವಳಿಯ ಪ್ರತಿಯನ್ನು ಮಂಡಿಸಲಾಗುತ್ತಿಲ್ಲ’ ಎಂದು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ತಿಳಿಸಿದ್ದಾರೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ನೀಡುವಂತೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಗುರುವಾರ ಲೋಕಸಭೆಯಲ್ಲಿ ನೋಟಿಸ್ ನೀಡಿತ್ತು. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ಜತೆ ಮುನಿಸಿಕೊಂಡು ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಟಿಡಿಪಿ ಸಹ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ಸೂಚಿಸಿದೆ.

‍ಅವಿಶ್ವಾಸ ಗೊತ್ತುವಳಿಗೆ ಬೆಂಬಲ ನೀಡುವುದಾಗಿ ಪ್ರತಿಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಐ(ಎಂ) ಹೇಳಿವೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.