ADVERTISEMENT

‘ಲೋಕಸಭೆ ಚುನಾವಣೆಗೂ ಮೊದಲು ಪ್ರಾರ್ಥಿಸಿ’

ದೆಹಲಿ ಆರ್ಚ್‌ ಬಿಷಪ್‌ ಪತ್ರ: ಬಿಜೆಪಿ ಟೀಕೆ

ಪಿಟಿಐ
Published 22 ಮೇ 2018, 19:38 IST
Last Updated 22 ಮೇ 2018, 19:38 IST

ನವದೆಹಲಿ: ದೇಶದಲ್ಲಿ ಮನೆಮಾಡಿರುವ ಆತಂಕಕಾರಿ ರಾಜಕೀಯ ಪರಿಸ್ಥಿತಿಯನ್ನು ಕೊನೆಗಾಣಿಸಲು 2019ರ ಲೋಕಸಭಾ ಚುನಾವಣೆಗೂ ಮೊದಲು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತೆ ದೆಹಲಿ ಆರ್ಚ್ ಬಿಷಪ್‌ ಅನಿಲ್‌ ಕೌಟೊ ಮನವಿ ಮಾಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ (ಮೇ 12ರಂದು) ದೆಹಲಿಯ ಚರ್ಚ್‌ಗಳ ಮುಖ್ಯಸ್ಥರಿಗೆ ಅವರು ಬರೆದ ಪತ್ರದಲ್ಲಿ ಈ ಮನವಿ ಮಾಡಿದ್ದಾರೆ.

ರಾಜಕೀಯ ವಲಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆರ್ಚ್‌ ಬಿಷಪ್‌ ನಡೆಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ADVERTISEMENT

ದೇಶದಲ್ಲಿ ಧರ್ಮ ಮತ್ತು ಜಾತಿ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯ ನಡೆಯುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಆತಂಕಕಾರಿ ರಾಜಕೀಯ ಪರಿಸ್ಥಿತಿ ದೇಶದ ಜಾತ್ಯತೀತ ಸಿದ್ಧಾಂತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಾಯ ತಂದೊಡ್ಡಿದೆ. ಹಾಗಾಗಿ ದೇಶದ ಉಳಿವಿಗಾಗಿ 2019ರ ಮೇ 13ರಿಂದ ಪ್ರಾರ್ಥನೆ ನಡೆಸುವಂತೆ  ಆರ್ಚ್ ಬಿಷಪ್‌ ಅನಿಲ್‌ ಕೌಟೊ ಪತ್ರದಲ್ಲಿ ಹೇಳಿದ್ದಾರೆ.

ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಆರ್ಚ್‌ ಬಿಷಪ್‌, ‘ಪ್ರಧಾನಿ ನರೇಂದ್ರ ಮೋದಿ ಅಥವಾ ಅವರ ಸರ್ಕಾರವನ್ನು ಗುರಿಯಾಗಿಸಿಕೊಂಡು ಈ ಪತ್ರವನ್ನು ಬರೆದಿಲ್ಲ’ ಎಂದು ಸಮಜಾಯಿಷಿ ನೀಡಿದ್ದಾರೆ.

ಪ್ರತಿ ಚುನಾವಣೆಗೂ ಮೊದಲು ದೇಶ ಮತ್ತು ರಾಜಕೀಯ ನಾಯಕರ ಹಿತಕ್ಕಾಗಿ ಸಾಮೂಹಿಕ ಪ್ರಾರ್ಥನಾ ಸಭೆಗಳು ನಡೆಸುವ ಸಂಪ್ರದಾಯ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಆರ್ಚ್‌ ಬಿಷಪ್‌ ಕಚೇರಿ ಸ್ಪಷ್ಟಪಡಿಸಿದೆ.

ಪೂರ್ವಗ್ರಹ ಪೀಡಿತ ಮನಸ್ಥಿತಿ: ‘ಪೂರ್ವಗ್ರಹ ಪೀಡಿತ ಮನಸ್ಥಿತಿಯಿಂದ ಹೊರಬನ್ನಿ’ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಆರ್ಚ್‌ ಬಿಷಪ್‌ ಅವರಿಗೆ ತಿರುಗೇಟು ನೀಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ನಾಲ್ಕು ವರ್ಷದ ಆಡಳಿತ ಅವಧಿಯಲ್ಲಿ ದೇಶದ ಅಲ್ಪಸಂಖ್ಯಾತರು ಅಭಿವೃದ್ಧಿ ಹೊಂದಿದ್ದಾರೆ. ಈ ವಿಷಯದಲ್ಲಿ ಮೋದಿ ಸರ್ಕಾರ ಯಾವುದೇ ತಾರತಮ್ಯ ಮಾಡಿಲ್ಲ’ ಎಂದು ನಖ್ವಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.