ADVERTISEMENT

ವರದಿಗಾರನ ವಿರುದ್ಧ ಹರಿಹಾಯ್ದ ವಾಧ್ರಾ

ಹರಿಯಾಣ ಭೂಹಗರಣ ಪ್ರಶ್ನೆಗೆ ಕಿಡಿ: ವಿವಾದದಲ್ಲಿ ಸೋನಿಯಾ ಅಳಿಯ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2014, 19:30 IST
Last Updated 2 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ಹರಿಯಾಣ ಭೂಹಗರಣದ ಬಗ್ಗೆ ಪ್ರಶ್ನೆ ಕೇಳಿದ ಖಾಸಗಿ ಸುದ್ದಿವಾಹಿನಿಯೊಂದರ ವರದಿಗಾರನ ಮೇಲೆ ಹರಿಹಾಯುವ ಮೂಲಕ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾಧ್ರಾ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಹರಿಯಾಣಾದಲ್ಲಿ ನಡೆದ ಭೂಹಗರಣದ ಕುರಿತು ಸಿಎಜಿ (ಮಹಾಲೇಖಪಾಲರು) ತನಿಖೆ ನಡೆಯು­ತ್ತಿರುವುದು ವಾಧ್ರಾಗೆ ಸಂಕಷ್ಟ ಎದುರಾಗಿದೆ. ಅಲ್ಲದೇ ಹರಿಯಾಣಾದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿ­ರುವುದು ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ಚಂಡೀಗಡ ವರದಿ:  ವಾಧ್ರಾ ಅವರ ವಿರುದ್ಧದ ಭೂಹ­ಗರಣ ಪ್ರಕರಣದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಹರಿಯಾಣ ಮುಖ್ಯ-­ಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಸ್ಪಷ್ಟಪಡಿಸಿದ್ದಾರೆ.

‘ವಾಧ್ರಾ ಅವರ ಕೋಪ ಅವರು ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಆ ಗುಟ್ಟಿನ ಬಗ್ಗೆ ಬಾಯಿ ಬಿಡಿಸಲು ಹೋದ   ಮಾಧ್ಯಮ ಪ್ರತಿನಿಧಿ ಮೇಲೆ ವಾಧ್ರಾ ಸಿಟ್ಟಾಗಿರು­ವುದು ಸಹಜ’ ಎಂದು ಆರೋಗ್ಯ ಸಚಿವ ಅನಿಲ್‌ ವಿಜ್‌ ಪ್ರತಿಕ್ರಿಯಿಸಿದ್ದಾರೆ.

ನಡೆದದ್ದು ಏನು?
ದೆಹಲಿಯ ಅಶೋಕಾ ಹೋಟೆಲ್‌ನಲ್ಲಿ ಶನಿವಾರ ಸಂಜೆ ನಡೆದ ಖಾಸಗಿ ಕಾರ್ಯಕ್ರಮ­ವೊಂದರಲ್ಲಿ ಭಾಗವಹಿಸಲು  ವಾಧ್ರಾ  ಬಂದಿದ್ದ ವೇಳೆ ಈ ಘಟನೆ ನಡೆದಿದೆ. 

ವರದಿಗಾರನ ಮೊದಲ ಒಂದೆರೆಡು ಪ್ರಶ್ನೆಗಳಿಗೆ ಸಹಜವಾಗಿ ಉತ್ತರಿಸಿದ ರಾಬರ್ಟ್‌ ವಾಧ್ರಾ ,  ಹರಿಯಾಣ ಭೂಹಗರಣ ಕುರಿತು ವರದಿಗಾರ ಪ್ರಶ್ನಿಸಿ­ದಾಗ ಏಕಾಏಕಿ ಸಿಟ್ಟಿಗೆದ್ದು ಸಂಯಮ ಕಳೆದುಕೊಂಡರು.

ವಾಧ್ರಾ ಸಮಜಾಯಿಷಿ

ಘಟನೆ ಕುರಿತು ವಾಧ್ರಾ ಕಚೇರಿಯಿಂದ ಬಿಡುಗಡೆ­ಯಾಗಿರುವ ಸಮಜಾಯಿಷಿ­ಯನ್ನು ಸುದ್ದಿವಾಹಿನಿ ಪ್ರಸಾರ ಮಾಡಿದೆ. ‘ಅದೊಂದು ಸಂಪೂರ್ಣ ಖಾಸಗಿ ಕಾರ್ಯಕ್ರಮ­ವಾದ್ದರಿಂದ ಮಾಧ್ಯಮಗಳಿಗೆ ಆಹ್ವಾನವಿರಲಿಲ್ಲ. ಅಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ನಾನೂ ನಿರೀಕ್ಷಿಸಿಯೂ ಇರಲಿಲ್ಲ. ಹೀಗಾಗಿ ನನ್ನನ್ನು ಪ್ರಶ್ನೆ ಕೇಳಿದ ವ್ಯಕ್ತಿ ಖಾಸಗಿ ಸುದ್ದಿ ಸಂಸ್ಥೆಯ ವರದಿಗಾರ ಎಂಬುವುದು ನನ್ನ ಗಮನಕ್ಕೆ ಬರಲಿಲ್ಲ. ಕಾರ್ಯ­ಕ್ರಮ ಆಯೋಜಕರು ನಿಯೋಜಿಸಿದ ವ್ಯಕ್ತಿ ಎಂದು ಭಾವಿಸಿದ್ದೆ’ ಎಂದು ವಾಧ್ರಾ ಸಮಜಾಯಿಷಿ ನೀಡಿದ್ದಾಗಿ ಖಾಸಗಿ ಸುದ್ದಿ ವಾಹಿನಿ ಹೇಳಿದೆ.

ADVERTISEMENT

ವರದಿಗಾರನ ಅನಿರೀಕ್ಷಿತ ಪ್ರಶ್ನೆಯಿಂದ ತೀವ್ರ ಮುಜುಗರಕ್ಕೆ ಒಳಗಾದ ಅವರು ‘ನೀವು ಗಂಭೀರವಾಗಿ ಈ ಪ್ರಶ್ನೆ ಕೇಳುತ್ತಿದ್ದೀರಾ?’ ಎಂದು ಕೋಪದಿಂದ ಐದಾರು ಬಾರಿ ವರದಿಗಾರನಿಗೆ ಮರು ಪ್ರಶ್ನೆ ಹಾಕಿ­ದರು. ನಂತರ ಸಿಟ್ಟಿನಿಂದ ಮೈಕ್‌ ತಳ್ಳಿ ಹೊರಟು ಹೋದರು.
ವರದಿಗಾರ ತನ್ನ ಪ್ರಶ್ನೆಗೆ ಉತ್ತರಿಸುವಂತೆ ಬೆನ್ನು ಬಿದ್ದಾಗ, ‘ನಿಮಗೇನು ತಿಕ್ಕಲಾ? ನಿಮ್ಮದೇನು  ಸಮಸ್ಯೆ? ಮೊದಲು ಕ್ಯಾಮೆರಾ ಬಂದ್‌ ಮಾಡಿ’ ಎಂದು ಕಿಡಿ ಕಾರುತ್ತಾ ತೆರಳಿದರು. ಅವರನ್ನು ಬೆನ್ನು ಬಿದ್ದ ವರದಿಗಾರನನ್ನು ವಾಧ್ರಾ ಅಂಗರಕ್ಷಕರು ತಡೆದರು.
‘ನನ್ನ ಪ್ರಶ್ನೆ ಸರಿಯಾಗಿಯೇ ಇದೆ’ ಎಂದು ವರದಿಗಾರ ಸಮರ್ಥಿಸಿಕೊಂಡಾಗ, ‘ಭೂಹಗರಣಗಳ  ಪ್ರಶ್ನೆಗೆ   ಉತ್ತರಿಸಲು ನೀನು ಸೂಕ್ತ ವ್ಯಕ್ತಿ ಅಲ್ಲ.  ನಿನ್ನ ಪ್ರಶ್ನೆಗೆ ಉತ್ತರಿಸುವ ಅಗತ್ಯವೂ ಇಲ್ಲ’ ಎಂದು ತಿರುಗೇಟು ನೀಡಿದರು.

ಈ ಪ್ರಹಸನವನ್ನು ಬಹುತೇಕ ರಾಷ್ಟ್ರೀಯ ಖಾಸಗಿ ವಾಹಿನಿಗಳು ಶನಿವಾರ ರಾತ್ರಿ ನಿರಂತರವಾಗಿ ಪ್ರಸಾರ ಮಾಡಿದವು. ಹಲವು ವಾಹಿನಿಗಳು ವಾಧ್ರಾ ವರ್ತನೆ ಕುರಿತು ರಾಜಕೀಯ ಧುರೀಣರೊಂದಿಗೆ ಚರ್ಚೆಯನ್ನೂ ನಡೆಸಿದವು.

ಈ ನಡುವೆ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ವಾಧ್ರಾ ಕುರಿತು ದೂರು ಸಲ್ಲಿಸಿ­ದಲ್ಲಿ ಕ್ರಮ ಕೈಗೊಳುವ ಬಗ್ಗೆ ಯೋಚಿಸ­ಲಾಗುವುದು ಎಂದಿದ್ದಾರೆ.

ಹತಾಶೆಯ ಪ್ರತೀಕ: ಬಿಜೆಪಿ ಲೇವಡಿ
ರಾಬರ್ಟ್‌ ವಾಧ್ರಾ ಮಾಧ್ಯಮ ಪ್ರತಿನಿಧಿಯೊಬ್ಬರ ಮೇಲೆ ಹರಿಹಾಯ್ದಿರುವುದು  ‘ಹತಾಶೆಯ ಪ್ರತೀಕ’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.
‘ಗಾಂಧಿ ಕುಟುಂಬ ಈಗ ದೇಶವನ್ನು ಆಳುತ್ತಿಲ್ಲ ಎಂಬುವುದನ್ನು ವಾಧ್ರಾ ಅರ್ಥ ಮಾಡಿಕೊಳ್ಳಬೇಕು’ ಎಂದು ಬಿಜೆಪಿ ಲೇವಡಿ ಮಾಡಿದೆ.
‘ರಾಬರ್ಟ್‌ ವಾಧ್ರಾ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ. ಸಾಮಾನ್ಯ ವ್ಯಕ್ತಿಯಾಗಿದ್ದರೆ ಹರಿಯಾಣದಲ್ಲಿ ಅಷ್ಟೊಂದು ಬೆಲೆ ಬಾಳುವ ಭೂಮಿಯನ್ನು ಹೇಗೆ ಪಡೆಯುತ್ತಿದ್ದರು’ ಎಂದು ಬಿಜೆಪಿ ಪ್ರಶ್ನಿಸಿದೆ.

ಅಳಿಯನ ಮನೆಗೆ ಸೋನಿಯಾ ಭೇಟಿ

ಈ ವಿವಾದದ ಬೆನ್ನಲ್ಲೇ ಸೋನಿಯಾ ಗಾಂಧಿ ಭಾನುವಾರ ತಮ್ಮ ಪುತ್ರಿ ಪ್ರಿಯಾಂಕಾ ಗಾಂಧಿ ಹಾಗೂ ಅಳಿಯ ರಾಬರ್ಟ್‌ ವಾಧ್ರಾ ದಂಪತಿ ನಿವಾಸಕ್ಕೆ ಭೇಟಿ ನೀಡಿದರು. ಲೋಧಿ ಎಸ್ಟೇಟ್‌ನಲ್ಲಿರುವ ವಾಧ್ರಾ ನಿವಾಸಕ್ಕೆ ಮಧ್ಯಾಹ್ನ ತೆರಳಿದ ಸೋನಿಯಾ ಅರ್ಧ ಗಂಟೆ ಕಳೆದರು. ಈ ವೇಳೆ ವಾಧ್ರಾ ಮನೆಯಲ್ಲಿಯೇ ಇದ್ದರು ಎನ್ನ­ಲಾ­ಗಿದೆ. ಭೇಟಿಯ ಹಿಂದಿನ ಉದ್ದೇಶ, ಮನೆಯಲ್ಲಿ ನಡೆದ ಚರ್ಚೆಯ ಮಾಹಿತಿ ತಕ್ಷಣಕ್ಕೆ  ಲಭ್ಯವಾಗಿಲ್ಲ.

ವಾಧ್ರಾ ಬೆಂಬಲಕ್ಕೆ ಕಾಂಗ್ರೆಸ್‌
ವ್ಯಕ್ತಿಯೊಬ್ಬನನ್ನು ಬೆಂಬಿಡದೆ ಕಾಡುವುದು, ಆತನ ಖಾಸಗಿತನಕ್ಕೆ ಧಕ್ಕೆ ತರುವ ಮಾಧ್ಯಮಗಳ ವರ್ತನೆ ಖಂಡಿತ ಶೋಭೆ ತರುವಂಥದಲ್ಲ ಎಂದು ಕಾಂಗ್ರೆಸ್‌ ಪ್ರತಿಕ್ರಿಯಿಸಿದೆ. ವಾಧ್ರಾ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್‌ ಘಟನೆ ನಡೆದ ಹಲವು ಗಂಟೆಗಳ ಬಳಿಕ  ಈ ಕುರಿತು ಪ್ರತಿಕ್ರಿಯೆ ನೀಡಿದೆ. ಮಾಧ್ಯಮಗಳನ್ನು ತರಾಟೆಗೆ ತೆಗೆದು­ಕೊಂಡಿದೆ.  ಅಲ್ಲದೇ ಅತ್ಯಂತ ಕ್ಷುಲ್ಲಕ ಘಟನೆ­ಯೊಂದನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ ಎಂದು  ಆಕ್ರೋಶ ವ್ಯಕ್ತಪಡಿಸಿದೆ.

ಕಾನೂನು ರೀತಿ ಕ್ರಮ: ಖಟ್ಟರ್‌
ಚಂಡೀಗಡ ವರದಿ:
ಉದ್ಯಮಿ ಹಾಗೂ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾಧ್ರಾ ಅವರ ವಿರುದ್ಧದ ಭೂಹಗರಣ ಪ್ರಕರಣದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಸ್ಪಷ್ಟಪಡಿಸಿದ್ದಾರೆ.

‘ವಾಧ್ರಾ ಅವರ ಕೋಪ ಅವರು ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಆ ಗುಟ್ಟಿನ ಬಗ್ಗೆ ಬಾಯಿ ಬಿಡಿ­ಸಲು ಹೋದ ಮಾಧ್ಯಮ ಪ್ರತಿನಿಧಿ ಮೇಲೆ ವಾಧ್ರಾ ಸಿಟ್ಟಾಗಿರುವುದು ಸಹಜ’ ಎಂದು ಆರೋಗ್ಯ ಸಚಿವ ಅನಿಲ್‌ ವಿಜ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.