ADVERTISEMENT

ವಾಗ್ದಾನ ನೀಡದ ಪಾಕ್‌

ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ನಿಲ್ಲಿಸಿ: ಷರೀಫ್‌ಗೆ ಸಿಂಗ್‌್ ಮನವಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2013, 19:59 IST
Last Updated 29 ಸೆಪ್ಟೆಂಬರ್ 2013, 19:59 IST
ವಾಗ್ದಾನ ನೀಡದ ಪಾಕ್‌
ವಾಗ್ದಾನ ನೀಡದ ಪಾಕ್‌   

ನ್ಯೂಯಾರ್ಕ್‌ (ಪಿಟಿಐ):  ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ನಿಲ್ಲಿಸುವ ಭರವಸೆ ನೀಡಬೇಕೆಂಬ ಭಾರತದ ಒತ್ತಾಸೆಗೆ ಪಾಕಿಸ್ತಾನವು ಯಾವುದೇ ಖಚಿತ ಭರವಸೆ ನೀಡಲಿಲ್ಲ.

ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರೊಂದಿಗಿನ ಉದ್ದೇಶಿತ ಮಾತುಕತೆ ರದ್ದುಪಡಿಸಬೇಕೆಂದು ಬಿಜೆಪಿ ಪಟ್ಟು ಹಿಡಿದಿದ್ದರೂ ಅದನ್ನು ಲೆಕ್ಕಿಸದ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ನಿಗದಿಯಂತೆ ನ್ಯೂಯಾರ್ಕ್‌ನಲ್ಲಿ ಭಾನು­ವಾರ ಷರೀಫ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಕೆಲವು ದಿನಗಳ ಹಿಂದೆ ಜಮ್ಮು–ಕಾಶ್ಮೀರದಲ್ಲಿ ನಡೆದ ಅವಳಿ ಆತ್ಮಹತ್ಯಾ ದಾಳಿ ಹಿನ್ನೆಲೆಯಲ್ಲಿ ಈ ಮಾತುಕತೆ ರದ್ದುಪಡಿಸುವಂತೆ  ಬಿಜೆಪಿ ಆಗ್ರಹಿಸಿತ್ತು.
ಷರೀಫ್‌ ಪಾಕ್‌ ಪ್ರಧಾನಿಯಾಗಿ ಅಧಿಕಾರವಹಿಸಿ ಕೊಂಡ ನಂತರ ಇದೇ ಮೊದಲ ಬಾರಿಗೆ ಪರಸ್ಪರ ಭೇಟಿಯಾದ ಉಭಯ ಮುಖಂಡರು, ದ್ವಿಪಕ್ಷೀಯ ಸಂಬಂಧವನ್ನು ಯಥಾಸ್ಥಿತಿಗೆ ತರುವ ಮಾರ್ಗೋಪಾಯಗಳ ಬಗ್ಗೆ ಸಮಾಲೋಚನೆ ನಡೆಸಿದರು.

ವಿಶ್ವಸಂಸ್ಥೆ ಮಹಾಸಭೆಯ ಸಂದರ್ಭದಲ್ಲಿ ಷರೀಫ್‌ ಅವರೊಂದಿಗೆ ಮಾತುಕತೆ ನಡೆಸಿದ  ಸಿಂಗ್‌, ಪಾಕ್‌ ನೆಲದಿಂದ ಹೊರಹೊಮ್ಮಿರುವ ಭಯೋತ್ಪಾದನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಗಡಿಯಲ್ಲಿ ನಡೆಯುವ  ಹಿಂಸೆಗೆ ಕಡಿವಾಣ ಹಾಕುವಂತೆಯೂ ಮನವಿ ಮಾಡಿಕೊಂಡರು.

ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್‌ ಖುರ್ಷಿದ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್‌ ಮೆನನ್‌, ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್‌ ಹಾಗೂ ಷರೀಫ್‌ ಸಲಹೆಗಾರ ಸರ್ತಾಜ್‌ ಅಜೀಜ್‌  ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಶ್ವಸಂಸ್ಥೆ ಮಹಾಸಭೆಯಲ್ಲಿ ಶನಿವಾರ ಪಾಕಿಸ್ತಾನವನ್ನು ಉದ್ದೇಶಿಸಿ ಖಾರವಾಗಿ ಮಾತನಾಡಿದ್ದ ಮನ­ಮೋಹನ್‌ ಸಿಂಗ್‌, ಪಾಕ್‌ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಕಾರ್ಯತಂತ್ರಕ್ಕೆ ಲಗಾಮು ಹಾಕ­ಬೇಕೆಂದು ಆ ದೇಶಕ್ಕೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದರು.

ಆಹ್ವಾನ...
‘ಸಿಂಗ್‌ ಹಾಗೂ ಷರೀಫ್‌ ಅವರು, ಗಡಿನಿ ಯಂತ್ರಣ ರೇಖೆಯಲ್ಲಿ ಕದನ ವಿರಾಮ ಒಪ್ಪಂದ ವನ್ನು ಮರುಸ್ಥಾಪಿಸಲು ಸ್ಪಷ್ಟ ಯೋಜನೆ ರೂಪಿಸುವ ಜವಾಬ್ದಾರಿಯನ್ನು ಉಭಯ ದೇಶಗಳ ಸೇನಾ ಕಾರ್ಯಾಚರಣೆ ಮಹಾನಿರ್ದೇಶಕರಿಗೆ ವಹಿಸಿದ್ದಾರೆ’ ಎಂದು ಶಿವಶಂಕರ್‌ ಮೆನನ್ ತಿಳಿಸಿದ್ದಾರೆ.

‘ಮಾತುಕತೆಗೆ ಮುನ್ನ ಗಡಿ ನಿಯಂತ್ರಣ ರೇಖೆ ಯಲ್ಲಿ ಪರಿಸ್ಥಿತಿ ಸುಧಾರಿಸಬೇಕು ಎನ್ನುವ ಅಂಶವನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ. ಉಭಯ ನಾಯಕರು ಪರಸ್ಪರರನ್ನು ತಮ್ಮ ದೇಶಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿಕೊಂಡರು. ಆದರೆ  ಭೇಟಿಯ ದಿನಾಂಕ ನಿಗದಿ­ಯಾಗಿಲ್ಲ’ ಎಂದೂ ಮೆನನ್‌್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.