ADVERTISEMENT

ವಿಡಿಯೊ ಕಾನ್ಫರೆನ್ಸ್‌ನಲ್ಲಿ ಜಗನ್‌ಮೋಹನ್ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2012, 19:30 IST
Last Updated 24 ಜೂನ್ 2012, 19:30 IST

ಹೈದರಾಬಾದ್:ಚೆಂಚಲಗುಡಾ ಜೈಲಿನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯವು ಆದೇಶಿಸಿರುವುದರಿಂದ ಸಂಸದ ಜಗನ್‌ಮೋಹನ್ ರೆಡ್ಡಿ ಅವರಿಗೆ ಸಾರ್ವಜನಿಕರ ಎದುರು ಕಾಣಿಸಿಕೊಳ್ಳುವ ಅವಕಾಶ ತಪ್ಪಿದೆ.

ತಾವು ಸ್ವತಃ ಹಾಜರಾಗಲು ಅವಕಾಶ ನೀಡಬೇಕು ಎಂಬ ಜಗನ್ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಧೀಶರು, ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದರೆ ಭದ್ರತೆಯ ಆತಂಕವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಹಿಂದಿನ ಬಾರಿ ವಿಚಾರಣೆಯ ವೇಳೆ ಪೊಲೀಸರು ಗುಂಡು ನಿರೋಧಕ ವಾಹನ ಬಳಸದೆ ಸಾಮಾನ್ಯ ವ್ಯಾನಿನಲ್ಲಿ ಜಗನ್ ಅವರನ್ನು ಕರೆದೊಯ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದಕ್ಕೆ ಜಗನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಲ್ಲದೆ ವೈಎಸ್‌ಆರ್ ಪಕ್ಷದ ಕಾರ್ಯಕರ್ತರು ಸಹ ಪ್ರತಿಭಟನೆ ವ್ಯಕ್ತಪಡಿಸಿದ್ದರು.

ಈ ಬಾರಿ ನ್ಯಾಯಾಲಯಕ್ಕೆ ಹಾಜರಾದಾಗ ತಾವೇ ಸ್ವತಃ ವಾದ ಮಾಡಿ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಪಡೆಯಬೇಕು ಎಂದು ಬಯಸಿದ್ದ ಜಗನ್ ಅವರಿಗೆ ನ್ಯಾಯಾಲಯದ ಆದೇಶದಿಂದ ನಿರಾಶೆಯಾಗಿದೆ.
ಈ ಮಧ್ಯೆ ಸಿಬಿಐ ಜಂಟಿ ನಿರ್ದೇಶಕ ಲಕ್ಷ್ಮಿನಾರಾಯಣ ಅವರ ದೂರವಾಣಿ ಸಂಭಾಷಣೆಗಳ ವಿವರಗಳು ಬಹಿರಂಗಗೊಂಡ ವಿಚಾರವನ್ನು ಬೀದಿರಂಪ ಮಾಡಿದ ವೈಎಸ್‌ಆರ್ ಪಕ್ಷದ ಕಾರ್ಯಕರ್ತರು ಕೆಲವು ಕಾಲ ರಸ್ತೆ ತಡೆ ನಡೆಸಿದ್ದರು.

ಒಬ್ಬ ಪತ್ರಕರ್ತ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್‌ವೊಬ್ಬರ ಕೈವಾಡದಿಂದಾಗಿ ನಕಲಿ ದೂರವಾಣಿ ಸಂಭಾಷಣೆಗಳ ವಿವರ ಬಹಿರಂಗಗೊಂಡಿರುವುದನ್ನು ಪೊಲೀಸರು ನಂತರ ಪತ್ತೆಹಚ್ಚಿದ್ದಾರೆ.ಲಕ್ಷ್ಮಿನಾರಾಯಣ ಅವರು ತಮ್ಮ ಸಹಪಾಠಿ ವಾಸಿರೆಡ್ಡಿ ಚಂದ್ರಬಾಲಾ ಮತ್ತು ಇತರ ಪತ್ರಕರ್ತರ ಜತೆ ಜಗನ್ ಪ್ರಕರಣದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ ಎಂಬಂತೆ ಬಿಂಬಿಸಲಾಗಿದೆ. ಇದರಿಂದ ವೈಎಸ್‌ಆರ್ ಪಕ್ಷದ ಕಾರ್ಯಕರ್ತರು ಕುಪಿತಗೊಂಡು ರಸ್ತೆ ತಡೆ ನಡೆಸಿದ್ದರು.

ಈ ಮಧ್ಯೆ ಸಾಮಾಜಿಕ ಕಾರ್ಯಕರ್ತೆ ಚಂದ್ರಬಾಲಾ ಅವರು ಈ ಸುಳ್ಳು ಸುದ್ದಿಯಿಂದ ಕುಪಿತಗೊಂಡಿದ್ದು,  ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.