ADVERTISEMENT

ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಹೆಸರು ಬಹಿರಂಗಕ್ಕೆ ಸರ್ಕಾರದ ನಕಾರ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2011, 19:30 IST
Last Updated 15 ಏಪ್ರಿಲ್ 2011, 19:30 IST

ನವದೆಹಲಿ (ಪಿಟಿಐ): ಕೆಲವು ದೇಶಗಳೊಂದಿಗೆ ಜೋಡಿ ತೆರಿಗೆ ತಪ್ಪಿಸುವ ಒಪ್ಪಂದ (ಡಿಟಿಎಟಿ) ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಇರಿಸಿರುವವರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್‌ಗೆ  ತಿಳಿಸಿದೆ.ಆದಾಗ್ಯೂ ಜರ್ಮನಿಯ ಲೀಚ್‌ಟೆನ್‌ಸ್ಟೀನ್ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿರುವ ಆರು ಮಂದಿಯ  ವಿರುದ್ಧ ತನಿಖೆ ಜಾರಿಯಲ್ಲಿರುವುದರಿಂದ ಅವರ ಹೆಸರನ್ನು ಮಾತ್ರ ಬಹಿರಂಗ ಪಡಿಸಲು ಸರ್ಕಾರ ಸಮ್ಮತಿಸಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರ ಪೀಠದ ಮುಂದೆ ಶುಕ್ರವಾರ ಹಾಜರಾದ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ, ಕಪ್ಪುಹಣ ಇಟ್ಟಿರುವವರ ವಿರುದ್ಧ ತನಿಖೆ ನಡೆದರೆ ಅಂತಹವರ ಹೆಸರನ್ನು ಬಹಿರಂಗಗೊಳಿಸಲು ಸರ್ಕಾರಕ್ಕೆ ಯಾವ ತೊಂದರೆಯು ಇಲ್ಲ ಎಂದಿದ್ದಾರೆ. ಸಾಲಿಸಿಟರ್ ಜನರಲ್ ಅವರ ಈ ವಿವರಣೆಗೆ ಸಮಾಧಾನಗೊಳ್ಳದ ನ್ಯಾಯಪೀಠವು, ಹೆಸರು ಬಹಿರಂಗ ಪಡಿಸಲು ಇರುವ ಅಡ್ಡಿ- ಆತಂಕಗಳೇನು? ಅಥವಾ ಯಾವುದಾದರೂ ಕಾನೂನು ಇದಕ್ಕೆ ಅಡ್ಡಪಡಿಸುತ್ತಿದೆಯೇ? ಎಂಬ ಬಗ್ಗೆ ಮುಂದಿನ ವಿಚಾರಣೆಯಲ್ಲಿ ವಿವರಿಸುವಂತೆ ಸೂಚಿಸಿದೆ.
 

ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಸುಮಾರು ಒಂದು ಲಕ್ಷ ಕೋಟಿ ಡಾಲರ್‌ಗಳಷ್ಟು ಕಪ್ಪುಹಣವನ್ನು ಠೇವಣಿ ಇರಿಸಿದ್ದಾರೆ. ಇದನ್ನು ವಾಪಸು ತರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹಿರಿಯ ವಕೀಲರಾದ ರಾಮ್‌ಜೇಠ್ಮಲಾನಿ ಅವರು ಸಲ್ಲಿಸಿರುವ ಅರ್ಜಿಯನ್ನು ಈ ಪೀಠ ವಿಚಾರಣೆ ನಡೆಸುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಮಾಜಿ ಡಿಜಿಪಿ ಕೆ.ಪಿ.ಎಸ್.ಗಿಲ್, ಲೋಕಸಭೆಯ ಮಾಜಿ ಮಹಾಕಾರ್ಯದರ್ಶಿ ಸುಭಾಷ್ ಕಶ್ಯಪ್ ಸೇರಿದಂತೆ ಐವರು ಮತ್ತು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಮತ್ತಿತರರು ಸಹ ಅರ್ಜಿ ಸಲ್ಲಿಸಿದ್ದಾರೆ.
 

ADVERTISEMENT

ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಇಟ್ಟಿರುವ ಭಾರತೀಯರ ಬಗ್ಗೆ ಮಾಹಿತಿ ಇದ್ದರೂ ಸಹ ಅಂತಹವರ ಹೆಸರನ್ನು ತಿಳಿಸಲು ನಿರಾಕರಿಸಿರುವ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಈ ಹಿಂದೆ ಕೂಡ ಅಸಮಾಧಾನ ವ್ಯಕ್ತಪಡಿಸಿ ಹೆಸರು ಬಹಿರಂಗ ಪಡಿಸಲು ಇರುವ ತೊಂದರೆಯಾದರೂ ಏನು? ಎಂದು ಪ್ರಶ್ನಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.