ADVERTISEMENT

ವಿದೇಶ ಬ್ಯಾಂಕ್‌ಗಳಲ್ಲಿನ ಕಪ್ಪು ಹಣದ ತನಿಖೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 19:30 IST
Last Updated 6 ಫೆಬ್ರುವರಿ 2011, 19:30 IST

ನವದೆಹಲಿ (ಪಿಟಿಐ): ವಿದೇಶದ ಬ್ಯಾಂಕ್‌ಗಳಲ್ಲಿ ಇರುವ ಕಪ್ಪು ಹಣದ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲು ಕೇಂದ್ರ ಸರ್ಕಾರ  ನಿರ್ಧರಿಸಿದೆ.

ಕಂದಾಯ ಇಲಾಖೆಯ ತೆರಿಗೆ ಸಂಗ್ರಹ ಕೆಲಸದಲ್ಲಿ ತೊಡಗಿರುವ  ‘ಐಆರ್‌ಎಸ್’ ಅಧಿಕಾರಿಗಳನ್ನು ಆ ಕರ್ತವ್ಯದಿಂದ ವಿಮುಖರನ್ನಾಗಿಸಿ ಕಪ್ಪು ಹಣ ಹೊಂದಿರುವವರ ಬಗ್ಗೆ ತನಿಖೆ ಮತ್ತು ಮಾಹಿತಿ ಸಂಗ್ರಹಿಸಲು ನಿಯೋಜಿಸುವ ಆದೇಶವನ್ನು ಹಣಕಾಸು ಸಚಿವಾಲಯ ಹೊರಡಿಸಿದೆ.

ಈ ಹೊಸ ಆದೇಶದಂತೆ ಆದಾಯ ತೆರಿಗೆ ಇಲಾಖೆಯಲ್ಲಿ  ನೋಡಲ್ ಅಧಿಕಾರಿಗಳ ವ್ಯಾಪ್ತಿಗೆ ಒಳಪಡುತ್ತಿದ್ದ ರೂ. 10 ಲಕ್ಷ ಮೊತ್ತದೊಳಗಿನ ತೆರಿಗೆ ಪ್ರಕರಣದ ಮಿತಿಯನ್ನು ರೂ. 30 ಲಕ್ಷಕ್ಕೆ ಏರಿಸಲಾಗಿದೆ. ರೂ. 10 ಲಕ್ಷದೊಳಗಿನ ತೆರಿಗೆ ಪ್ರಕರಣಗಳನ್ನು ಐಆರ್‌ಎಸ್ ದರ್ಜೆಯ ಅಧಿಕಾರಿಗಳಾದ ಸಹಾಯಕ ಆಯುಕ್ತರು ಇಲ್ಲವೆ ಉಪ ಆಯುಕ್ತರು ನಿರ್ವಹಿಸಲಿದ್ದಾರೆ.
ಈ ಹೊಸ ಆದೇಶದ ನಿಯಮಗಳು ಏಪ್ರಿಲ್ 1ರಿಂದ (ಮುಂಬರುವ ಆರ್ಥಿಕ ವರ್ಷ 2011-12) ಜಾರಿಗೆ ಬರಲಿದೆ.

ADVERTISEMENT

‘ವಿದೇಶದ ಬ್ಯಾಂಕ್‌ಗಳಲ್ಲಿ ಹೂಡುವ ಕಪ್ಪು ಹಣಕ್ಕೆ ಕಡಿವಾಣ ಹಾಕುವಲ್ಲಿ ಹಣಕಾಸು ಇಲಾಖೆ ಎದುರಿಸುತ್ತಿರುವ ಹೊಸ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

‘ಈ ಆದೇಶದ ಮೂಲಕ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸುತ್ತಿದ್ದ ತೆರಿಗೆ ವಂಚನೆ ಪ್ರಕರಣಗಳ ಮೊತ್ತದ ಮಿತಿಯನ್ನು ಒಂದು ದಶಕದ ಬಳಿಕ ಬದಲಾಯಿಸಲಾಗಿದೆ’ ಎಂದು ಹಣಕಾಸ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಹೊಸ ಆದೇಶದಂತೆ ಐಆರ್‌ಎಸ್ ಅಧಿಕಾರಿಗಳು ಅಂತರರಾಷ್ಟ್ರೀಯ ತೆರಿಗೆ ವಿಧಾನ, ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ಮತ್ತು ಈ ಬಗ್ಗೆ ಬೇಹುಗಾರಿಕೆ  ಮಾಡಹುದಾಗಿದೆ. ಹಾಗೆಯೇ ಇಂತಹ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನೂ ನಡೆಸಬಹುದಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಆದೇಶದ ಹೊಸ ನಿಯಾಮವಳಿಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಸಣ್ಣ ನಗರಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೇತರ ವಲಯದ (ನಾನ್ ಕಾರ್ಪೊರೇಟ್) ರೂ.  15 ಲಕ್ಷದೊಳಗಿನ ತೆರಿಗೆ ಪ್ರಕರಣಗಳು ಮತ್ತು ಉದ್ದಿಮೆ ವಲಯದ (ಕಾರ್ಪೊರೇಟ್) ರೂ. 20 ಲಕ್ಷದೊಳಗಿನ ತೆರಿಗೆ ಪ್ರಕರಣಗಳು ಐಆರ್‌ಎಸ್ ಅಧಿಕಾರಿಗಳ ವ್ಯಾಪ್ತಿಗೆ ಒಳಪಡಲಿದೆ.

ಹಾಗೆಯೇ ಮೆಟ್ರೊ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತ, ಹೈದರಾಬಾದ್ ಮತ್ತಿತರ ಬೃಹತ್ ನಗರಗಳಲ್ಲಿ ಉದ್ದಿಮೇತರ ವಲಯದ ರೂ. 20 ಲಕ್ಷದೊಳಗಿನ ತೆರಿಗೆ ಪ್ರಕರಣಗಳು ಮತ್ತು ಉದ್ದಿಮೆ ವಲಯದ ರೂ. 30 ಲಕ್ಷದೊಳಗಿನ ತೆರಿಗೆ ಪ್ರಕರಣಗಳು ಐಆರ್‌ಎಸ್ ಅಧಿಕಾರಿಗಳು ವ್ಯಾಪ್ತಿಗೆ ಬರಲಿದೆ ಎಂದು ಈ ಆದೇಶ ಹೊರಡಿಸಿರುವ ಹಣಕಾಸು ಇಲಾಖೆಯ ನೇರ ತೆರಿಗೆಯ ಕೇಂದ್ರ ಮಂಡಳಿ (ಸಿಬಿಡಿಟಿ) ಹೇಳಿದೆ.

 ಗ್ರಾಮೀಣ ಪ್ರದೇಶದ ಜನರು ರೂ. 10ಲಕ್ಷದೊಳಗಿನ ತೆರಿಗೆ ಪ್ರಕರಣಗಳಿಗೆ ನಗರ ಪ್ರದೇಶದಲ್ಲಿದ್ದ ಆದಾಯ ತೆರಿಗೆ ಇಲಾಖೆಗೆ ಎಡತಾಕಬೇಕಿತ್ತು. ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುವುದರ ಜೊತೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೂ ಹೆಚ್ಚಿನ ಹೊರೆ ಆಗುತ್ತಿತ್ತು.

ಹೊಸ ಆದೇಶದಂತೆ ರೂ.10 ಲಕ್ಷದೊಳಗಿನ ಪ್ರಕರಣಗಳನ್ನು ಆಯಾಯ ಪ್ರದೇಶದ ಐಆರ್‌ಎಸ್ ಅಧಿಕಾರಿಗಳೇ ನಿರ್ವಹಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದರ ಜೊತೆಗೆ ಆದಾಯ ಇಲಾಖೆಯ ಮೇಲಿನ ಹೊರೆಯು ಕಡಿಮೆ ಆಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.