ನವದೆಹಲಿ (ಪಿಟಿಐ): ಸ್ವಾತಂತ್ರ್ಯೋತ್ಸವ ಸಮಯದಲ್ಲಿ ಉಗ್ರರು ನಡೆಸಬಹುದಾದ ವಿಮಾನ ಅಪಹರಣ, ಆತ್ಮಹತ್ಯಾ ದಾಳಿ, ಮಾನವ ಬಾಂಬ್‌ನಂತಹ ಸಂಭವನೀಯ ವಿಧ್ವಂಸಕ ಕೃತ್ಯಗಳನ್ನು ತಡೆಯಲು ಭದ್ರತಾ ಸಂಸ್ಥೆಗಳು ದೇಶದಾದ್ಯಂತ ಬಿಗಿಭದ್ರತೆಯನ್ನು ಚುರುಕುಗೊಳಿಸಿವೆ.
ಬೋಡೋಗಳು ಹಾಗೂ ಬಾಂಗ್ಲಾ ವಲಸಿಗರ ನಡುವೆ ಅಸ್ಸಾಂನಲ್ಲಿ ಈಚೆಗೆ ನಡೆದ ಘರ್ಷಣೆಯಲ್ಲಿ 77 ಜನ ಮೃತಪಟ್ಟಿದ್ದು, ಈ ಪ್ರದೇಶದಲ್ಲಿ ಮತ್ತೆ ಘರ್ಷಣೆ ಸಂಭವಿಸುವ ಸುಳಿವು ಸಿಕ್ಕಿರುವುದರಿಂದ ಕಟ್ಟೆಚ್ಚರವಹಿಸಲಾಗಿದೆ.
ವಾಯು ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಪಶ್ಚಿಮ ಕರಾವಳಿ ಭಾಗದಲ್ಲೂ ಬಿಗಿ ಭದ್ರತೆಯನ್ನು ಚುರುಕುಗೊಳಿಸಲಾಗಿದೆ.
ರಾಜಧಾನಿ ದೆಹಲಿಯಲ್ಲಿ ಅದರಲ್ಲೂ ಕೆಂಪು ಕೋಟೆ ಸುತ್ತಮುತ್ತ ಪೊಲೀಸರು ಎಲ್ಲ ಬಗೆಯ ತಪಾಸಣೆ ಕಾರ್ಯ ಆರಂಭಿಸಿದ್ದು, ಅಕ್ಕಪಕ್ಕದ ವಸತಿಗೃಹಗಳಿಗೆ ಬಂದುಹೋಗುವವರ ಮೇಲೆ ನಿಗಾ ಇಡಲಾಗಿದೆ. ದೆಹಲಿ ಪ್ರವೇಶಿಸುವ ಹಾಗೂ ಹೊರ ಹೋಗುವ ಎಲ್ಲ ಮಾರ್ಗಗಳಲ್ಲಿ ಗಸ್ತು ಹಾಕಲಾಗಿದೆ. ಇಂತಹ ಸಂದರ್ಭಗಳಲ್ಲಿ ಕೆಲ ಹುಸಿ ಬೆದರಿಕೆ ಕರೆಗಳೂ ಬರುವ ಸಂಭವ ಇದ್ದು, ಈ ಬಗ್ಗೆಯೂ ಪೂರ್ಣ ತನಿಖೆ ಕೈಗೊಳ್ಳಲಾಗುವುದು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.