ADVERTISEMENT

ವಿನಾಯಕ ಸೇನ್ ಗೆ ಸುಪ್ರೀಂಕೋರ್ಟ್ ಜಾಮೀನು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2011, 9:45 IST
Last Updated 15 ಏಪ್ರಿಲ್ 2011, 9:45 IST
ವಿನಾಯಕ ಸೇನ್ ಗೆ ಸುಪ್ರೀಂಕೋರ್ಟ್ ಜಾಮೀನು
ವಿನಾಯಕ ಸೇನ್ ಗೆ ಸುಪ್ರೀಂಕೋರ್ಟ್ ಜಾಮೀನು   

ನವದೆಹಲಿ (ಪಿಟಿಐ/ಐಎಎನ್ಎಸ್): ಪ್ರಭುತ್ವದ ವಿರುದ್ಧ ಹೋರಾಡಲು ನಕ್ಸಲೀಯರ ಜತೆ ಸೇರಿ ಸಂಚು ರೂಪಿಸಿ ರಾಷ್ಟ್ರದ್ರೋಹ ಎಸಗಿದ ಆರೋಪಕ್ಕಾಗಿ ಜೀವಾವಧಿ ಶಿಕ್ಷೆಗೊಳಗಾಗಿರುವ ಮಾನವ ಹಕ್ಕು ಕಾರ್ಯಕರ್ತ ವಿನಾಯಕ ಸೆನ್ ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.

ಜಾಮೀನು ನೀಡಿಕೆಯು ವಿಚಾರಣಾ ನ್ಯಾಯಾಲಯದ ಸಮಾಧಾನಕ್ಕೆ ಬಿಟ್ಟ ವಿಷಯ ಎಂದಿರುವ ಸುಪ್ರೀಂಕೋರ್ಟ್ ಸೆನ್ ವಿರುದ್ದ ರಾಜದ್ರೋಹಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣಗಳು ಇಲ್ಲ ಎಂದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಹೆಚ್.ಎಸ್.ಬೇಡಿ ಹಾಗೂ ಸಿ.ಕೆ.ಪ್ರಸಾದ್ ಅವರನ್ನೊಳಗೊಂಡ ನ್ಯಾಯಪೀಠವು ಇದೇ ವೇಳೆ ಗಾಂಧಿ ಅವರ ಆತ್ಮಚರಿತ್ರೆಯನ್ನು ಇಟ್ಟುಕೊಂಡ ತಕ್ಷಣ ಅವರು ಮಹಾತ್ಮಗಾಂಧಿ ಆಗಲು ಸಾಧ್ಯವಿಲ್ಲ ಎಂದಿದೆ.

ADVERTISEMENT

ದೇಶದ ಸೌಹರ್ದತೆಯನ್ನು ಹಾಳು ಮಾಡುವಲ್ಲಿ ಸೆನ್ ಅವರು ಕ್ರಿಯಾಶೀಲರಾಗಿದ್ದಾರೆ ಎನ್ನುವ ರಾಜ್ಯಸರ್ಕಾರದ ವಾದವು ಹಾಸ್ಯಾಸ್ಪದವಾಗಿದೆ ಎಂದು ಇದೇ ವೇಳೆ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ರಾಜ್ಯ ಸರ್ಕಾರದ ವಾದದಂತೆ ನಿಷೇಧಿತ ವಸ್ತುಗಳ ಸಾಗಣೆ ಹಾಗೂ ಪ್ರಸರಣದಲ್ಲಿ ಸೆನ್ ಅವರು ತೊಡಗಿದ್ದಾರೆ ಎನ್ನುವುದೇ ದಿಟವಾದಲ್ಲಿ ಸಹ ಸೆನ್ ಅವರು ರಾಜದ್ರೋಹ ಎಸಗಿದಂತಾಗೊಲ್ಲ ಎಂದೂ ಸಹ ನ್ಯಾಯಪೀಠ ತಿಳಿಸಿದೆ.

61 ವರ್ಷದ ವಿನಾಯಕಸೆನ್ ಅವರಿಗೆ 2010ರ ಡಿಸೆಂಬರ್ 24 ರಂದು ರಾಜದ್ರೋಹದ ಆಪಾದನೆ ಮೇರೆಗೆ ಜೀವಾವಧಿ ಶಿಕ್ಷೆ ನೀಡಿತ್ತು. ನಂತರ ಫೆಬ್ರುವರಿ 10 ರಂದು ಛತೀಸ್ ಗಡ ಹೈಕೋರ್ಟ್ ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಈ ಸಮಯದಲ್ಲಿ ರಾಜ್ಯಸರ್ಕಾರವು ನಕ್ಸಲರಿಗೆ ನಗರ ಪ್ರದೇಶಗಳಲ್ಲಿ ಸಹಾನೂಭೂತಿ ಗಳಿಸಿಕೊಡುವ ನಿಟ್ಟಿನಲ್ಲಿ ಸೆನ್ ಕಾರ್ಯಪ್ರವೃತ್ತರಾಗಿದ್ಧಾರೆ ಎನ್ನುವ ವಾದವನ್ನು ಸುಪ್ರೀಂಕೋರ್ಟ್ ಸಾರಾಸಗಟಾಗಿ ನಿರಾಕರಿಸಿದೆ. ಕೇವಲ ಸಹಾನುಭೂತಿ ಗಳಿಸಿಕೊಡುತ್ತಿದ್ದಾರೆ ಎನ್ನುವುದೇ ರಾಜದ್ರೋಹದ ಆಪಾದನೆಯಾಗಬಾರದೆಂದು ಸ್ಪಷ್ಟಪಡಿಸಿದೆ.

ಹಿರಿಯ ವಕೀಲ ರಾಮ್ ಜೇಟ್ ಮಲಾನಿ ಅವರ ಸೆನ್ ಪರ ವಕಾಲತ್ತು ವಹಿಸಿದ್ದರು.

ಸ್ವಾಗತ:  ಗೃಹಸಚಿವ ಪಿ. ಚಿದಂಬರಂ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಅವರು, ಸುಪ್ರೀಕೋರ್ಟ್  ಸೆನ್ ಅವರಿಗೆ ಜಾಮೀನು ನೀಡಿರುವುದನ್ನು ಸ್ವಾಗತಿಸಿದ್ದಾರೆ.

ಇದೇ ವೇಳೆ ಬಿಯಾಂಕ ಸೆನ್ ಅವರ ತಾಯಿ ಸುಪ್ರೀಂಕೋರ್ಟ್ ಜಾಮೀನು ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿ ದೇಶದ ನ್ಯಾಯಾಂದ ವ್ಯವಸ್ಥೆ ಬಗೆಗೆ ತಮಗೆ ಮತ್ತೆ ನಂಬಿಕೆ ಬಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.