ADVERTISEMENT

ವಿಮಾನ ಅಪಘಾತದಲ್ಲಿ ನೇತಾಜಿ ಸಾವು: ಆಶಿಶ್‌ ರೇ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST
ವಿಮಾನ ಅಪಘಾತದಲ್ಲಿ ನೇತಾಜಿ ಸಾವು: ಆಶಿಶ್‌ ರೇ
ವಿಮಾನ ಅಪಘಾತದಲ್ಲಿ ನೇತಾಜಿ ಸಾವು: ಆಶಿಶ್‌ ರೇ   

ಕೋಲ್ಕತ್ತಾ:‘ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಕುರಿತು  ತಮ್ಮ ಬಳಿ ಸಾಕ್ಷ್ಯ ಇದೆ’ ಎಂದು ನೇತಾಜಿ ಅವರ ಸೋದರ ಮೊಮ್ಮಗ ಹಾಗೂ ಸಂಶೋಧಕ ಆಶಿಶ್‌ ರೇ ಭಾನುವಾರ ಹೇಳಿದ್ದಾರೆ.

‘1945 ಆಗಸ್ಟ್‌ 18ರಂದು ತೈವಾನ್‌ನ ತೈಪೆಯಲ್ಲಿ    ಸಂಭವಿಸಿದ ವಿಮಾನ ಅಪಘಾತದಲ್ಲಿ ಬೋಸ್‌ ಅವರು ಮೃತಪಟ್ಟಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. ‘ಜಪಾನ್‌ನ ರೆಂಕೋಜಿ ದೇವಾಲಯದಲ್ಲಿರುವ ನೇತಾಜಿ ಅವರ ಚಿತಾಭಸ್ಮವನ್ನು ಭಾರತಕ್ಕೆ ತರಬೇಕು’ ಎಂದೂ ರೇ ಆಗ್ರಹಿಸಿದ್ದಾರೆ.

‘ನೇತಾಜಿ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬುದನ್ನು ಮೂರು ವರದಿಗಳು ದೃಢಪಡಿಸಿವೆ. ಅವರು ಸೋವಿಯತ್ ಒಕ್ಕೂಟ ಪ್ರವೇಶಿಸಿರುವ ಸಾಧ್ಯತೆ ಇಲ್ಲ ಮತ್ತು  ಅಲ್ಲಿ ಅವರು ಕೈದಿಯಾಗಿರಲಿಲ್ಲ’ ಎಂದೂ ಹೇಳಿದ್ದಾರೆ.

‘ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು  ಕಮ್ಯುನಿಷ್ಟ್‌ ರಾಷ್ಟ್ರವಾದ ರಷ್ಯಾ ಸಹಾಯ ಮಾಡಬಹುದು ಎಂದು ನೇತಾಜಿ ವಿಶ್ವಾಸ ಇರಿಸಿಕೊಂಡಿದ್ದರು. ಅದಕ್ಕಾಗಿ ಅವರು ರಷ್ಯಾಕ್ಕೆ ತೆರಳಲು ಬಯಸಿದ್ದರು’ ಎಂದು ತಿಳಿಸಿದ್ದಾರೆ.

‘ತಮಗೆ ರಕ್ಷಣೆ ನಿಡಲು ಜಪಾನ್‌ಗೆ ಸಾಧ್ಯವಿಲ್ಲ ಎಂದು ನೇತಾಜಿ ಅರಿತಿದ್ದರು. ಯಾಕೆಂದರೆ ಅದು ಶರಣಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವ ತಮ್ಮ ಧ್ಯೇಯಕ್ಕೆ ಸೋವಿಯತ್‌ ಒಕ್ಕೂಟ  ಮಾತ್ರ ಸಹಾಯ ಮಾಡಬಲ್ಲುದು ಎಂದು ಅವರು ಬಲವಾಗಿ ನಂಬಿದ್ದರು’ ಎಂದು ರೇ ವಿವರಿಸಿದ್ದಾರೆ. ‘ನೇತಾಜಿ ಸಾವಿನ ಕುರಿತು ಭಾರತದ ನಿಲುವು ಭಾವನಾತ್ಮಕವಾಗಿದೆ. ಆದರೆ ಸತ್ಯವನ್ನು ತಿಳಿಯಲು ಇದರಿಂದ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.