ADVERTISEMENT

ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಮನವಿ...

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಮತ್ತು ಇತರ ಇಬ್ಬರ ವಿರುದ್ಧ ಸಾರ್ವಜನಿಕ ಸೇವೆಯಲ್ಲಿರುವವರು ವಿಶ್ವಾಸ ದ್ರೋಹ ಎಸಗಿದ ಹೊಸ ಆರೋಪವನ್ನು ಹೊರಿಸಲು ಸಿಬಿಐ ಸೋಮವಾರ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಯು.ಯು. ಲಲಿತ್ ಅವರು ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ. ಸೈನಿ ಅವರಲ್ಲಿ ಈ ಕುರಿತ ಮನವಿ ದಾಖಲಿಸಿದ್ದಾರೆ.ಭಾರತೀಯ ದಂಡ ಸಂಹಿತೆಯ 409ನೇ ಸೆಕ್ಷನ್‌ನಡಿ ವಿಶ್ವಾಸ ದ್ರೋಹದ ಪ್ರಕರಣವನ್ನು ರಾಜಾ, ಅವರ ಮಾಜಿ ಆಪ್ತ ಕಾರ್ಯದರ್ಶಿ ಆರ್.ಕೆ. ಚಂದೋಲಿಯ ಮತ್ತು ದೂರಸಂಪರ್ಕ ಖಾತೆ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ ವಿರುದ್ಧ `ಖಚಿತವಾಗಿ ದಾಖಲಿಸಬಹುದು~ ಎಂದು ಮನವಿ ಹೇಳಿದೆ.
 

ರಾಜಾ ಮತ್ತು ಇಬ್ಬರು ಮಾಜಿ ಅಧಿಕಾರಿಗಳಲ್ಲದೆ, ಡಿಎಂಕೆ ಸಂಸದೆ ಕನಿಮೊಳಿ ಮತ್ತು ಮೂರು ದೂರಸಂಪರ್ಕ ಸಂಸ್ಥೆಗಳ ವಿರುದ್ಧವೂ 409ನೇ ಸೆಕ್ಷನ್‌ನಡಿ (ಕ್ರಿಮಿನಲ್ ದ್ರೋಹ) ಆರೋಪ ಹೊರಿಸಬಹುದು ಎಂದು ಸಿಬಿಐ ತಿಳಿಸಿದೆ.

`ಆರೋಪಿಗಳಾದ 1,2 ಮತ್ತು 3 (ರಾಜಾ, ಬೆಹುರಾ ಮತ್ತು ಚಂದೋಲಿಯ) ಸಾರ್ವಜನಿಕ ಸೇವಕರಾಗಿದ್ದು 2ಜಿ ತರಂಗಾಂತರದ ಬಗ್ಗೆ ಪರಮಾಧಿಕಾರ ಹೊಂದಿದ್ದರು.

ಇವರು ಇತರ ಆರೋಪಿಗಳ ಜತೆ ಪಿತೂರಿ ನಡೆಸಿ ಮೌಲ್ಯಯುತ 2ಜಿ ತರಂಗಾಂತರವನ್ನು ಅಕ್ರಮವಾಗಿ ಹಾಗೂ ನೀತಿ ನಿಯಮ ಉಲ್ಲಂಘಿಸಿ ಆರೋಪಿಗಳಾದ ನಂ.4 (ಸ್ವಾನ್ ಟೆಲಿಕಾಂ ಪ್ರವರ್ತಕ ಶಾಹಿದ್ ಉಸ್ಮಾನ್ ಬಲ್ವಾ), 5 (ವಿನೋದ್ ಗೋಯೆಂಕಾ), 6 (ಸ್ವಾನ್ ಟೆಲಿಕಾಂ), 7 (ಯೂನಿಟೆಕ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ) ಮತ್ತು 9 (ಯೂನಿಟೆಕ್ ವೈರ್‌ಲೆಸ್ ತಮಿಳುನಾಡು ಲಿ.)ಗೆ ನ್ಯಾಯಬಾಹಿರವಾಗಿ ಲಾಭ ಮಾಡಿಕೊಟ್ಟಿದ್ದಾರೆ~ ಎಂದು ಸಿಬಿಐ ಕೋರ್ಟ್‌ಗೆ ಹೇಳಿದೆ.

`ಈ ಮೂಲಕ ಆರೋಪಿ ರಾಜಾ, ಬೆಹುರಾ ಮತ್ತು ಚಂದೋಲಿಯ ಹಾಗೂ ಇತರ ಆರೋಪಿಗಳು ಐಪಿಸಿ 409ನೇ ಸೆಕ್ಷನ್‌ನಡಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ~ ಸಿಬಿಐ ಮನವಿ ವಿವರಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT