ADVERTISEMENT

ವಿಶ್ವದ ಮೊದಲ ಮಹಿಳಾ ರೈಲಿಗೆ 26 ವರ್ಷ

ಮುಂಬೈನ ಚರ್ಚ್‌ಗೇಟ್‌– ಬೊರಿವಲಿ ನಿಲ್ದಾಣಗಳ ನಡುವೆ ಸಂಚಾರ

​ಪ್ರಜಾವಾಣಿ ವಾರ್ತೆ
Published 5 ಮೇ 2018, 19:30 IST
Last Updated 5 ಮೇ 2018, 19:30 IST
ವಿಶ್ವದ ಮೊದಲ ಮಹಿಳಾ ವಿಶೇಷ ರೈಲು
ವಿಶ್ವದ ಮೊದಲ ಮಹಿಳಾ ವಿಶೇಷ ರೈಲು   

ಮುಂಬೈ: ಪಶ್ಚಿಮ ರೈಲ್ವೆ ವಲಯವು ಇಲ್ಲಿನ ಚರ್ಚ್‌ಗೇಟ್‌ ಮತ್ತು ಬೊರಿವಲಿ ನಿಲ್ದಾಣಗಳ ನಡುವೆ ಮಹಿಳಾ ಪ್ರಯಾಣಿಕರಿಗಾಗಿಯೇ ಪರಿಚಯಿಸಿದ ವಿಶ್ವದ ಮೊದಲ ಮಹಿಳಾ ವಿಶೇಷ ರೈಲಿಗೆ ಶನಿವಾರ 26 ವರ್ಷ ತುಂಬಿತು.

ಪಶ್ಚಿಮ ರೈಲ್ವೆಯು 1992ರ ಮೇ 5ರಂದು ಈ ಎರಡು ನಿಲ್ದಾಣಗಳ ನಡುವೆ ಮಹಿಳಾ ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಉಪನಗರ ರೈಲು ಸಂಚಾರ ಆರಂಭಿಸಿತ್ತು.

ಆರಂಭದಲ್ಲಿ ಈ ರೈಲು ದಿನಕ್ಕೆ ಎರಡು ಬಾರಿ ಸಂಚರಿಸುತ್ತಿತ್ತು. ಈಗ ಸಂಚಾರ ಸಂಖ್ಯೆ ಹೆಚ್ಚಿಸಿದ್ದು, ಬೆಳಗಿನ ದಟ್ಟಣೆ ಅವಧಿಯಲ್ಲಿ 4 ಮತ್ತು ಸಂಜೆಯ ದಟ್ಟಣೆ ಅವಧಿಯಲ್ಲಿ 4 ಬಾರಿ ಸೇರಿ ದಿನಕ್ಕೆ 8 ಸಲ ಸಂಚಾರ ನಡೆಸುತ್ತಿದೆ.

ADVERTISEMENT

ಚರ್ಚ್‌ಗೇಟ್‌ ಮತ್ತು ಬೊರಿವಲಿ ನಡುವೆ ಸಂಚರಿಸುತ್ತಿದ್ದ ಮಹಿಳಾ ವಿಶೇಷ ರೈಲನ್ನು 1993ರಲ್ಲಿ ವಿರರ್‌ ನಿಲ್ದಾಣಕ್ಕೂ ವಿಸ್ತರಿಸಲಾಗಿತ್ತು.

‘ಇಡೀ ರೈಲನ್ನು ಮಹಿಳಾ ಪ್ರಯಾಣಿಕರಿಗೆ ಅರ್ಪಿಸಿ, ಪಶ್ಚಿಮ ರೈಲ್ವೆಯು ಇತಿಹಾಸ ನಿರ್ಮಿಸಿದೆ. ಬೇರೆ ರೈಲ್ವೆ ವಲಯಗಳಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದೆ.

ವಿಶ್ವದ ಯಾವುದೇ ಉಪನಗರ ರೈಲು ಸಂಚಾರ ಸೇವೆಯಲ್ಲಿ ಮಹಿಳಾ ಪ್ರಯಾಣಿಕರಿಗೆ ಈ ರೀತಿ, ದಟ್ಟಣೆಯ ಮಾರ್ಗದಲ್ಲಿ ನಿರಂತರ ಸೇವೆ ಒದಗಿಸಿ, 26 ವರ್ಷ ಪೂರೈಸಿರುವುದು ಒಂದು ಮೈಲುಗಲ್ಲು’ ಎಂದು ಪಶ್ಚಿಮ ರೈಲ್ವೆಯ ಮುಖ್ಯ ವಕ್ತಾರ ರವೀಂದ್ರ ಭಾಕರ್‌ ತಿಳಿಸಿದ್ದಾರೆ.

‘ಈ ವಿಶೇಷವನ್ನು ಸಂಭ್ರಮದಿಂದ ಆಚರಿಸುವ ಬಗ್ಗೆಯೂ ಯೋಚಿಸಿದ್ದೇವೆ. ವಿಶೇಷ ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರನ್ನು ಅಭಿನಂದಿಸುವ ಜತೆಗೆ, ರೈಲು ಸಂಚಾರ ಸೇವೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ಅಳವಡಿಸಿಕೊಳ್ಳಲು ಅವರಿಂದ ಸಲಹೆ, ಅಭಿಪ್ರಾಯಗಳನ್ನು ಸಂಗ್ರಹಿಸುವ ಚಿಂತನೆಯೂ ಇದೆ’ ಎಂದು ಅವರು ತಿಳಿಸಿದರು.

ಪಶ್ಚಿಮ ರೈಲ್ವೆಯನ್ನು ಅನುಕರಿಸುತ್ತಿರುವ ಕೇಂದ್ರ ರೈಲ್ವೆ ವಲಯವು 1992ರ ಜುಲೈ 1ರಿಂದ ಮಹಿಳೆಯರಿಗಾಗಿಯೇ ಛತ್ರಪತಿ ಶಿವಾಜಿ ಟರ್ಮಿನಸ್‌– ಕಲ್ಯಾಣ್‌ ನಡುವೆ ಉಪನಗರ ರೈಲು ಸೇವೆಯನ್ನು ಒದಗಿಸುತ್ತಿದೆ.

**

ಮುಂಬೈನ ಲಕ್ಷಾಂತರ ಮಹಿಳಾ ಪ್ರಯಾಣಿಕರಿಗೆ ಮನೆಯಿಂದ ಕೆಲಸದ ಸ್ಥಳಕ್ಕೆ ಸುರಕ್ಷಿತವಾಗಿ ಪ್ರಯಾಣಿಸಲು ‌ಹಲವು ವರ್ಷಗಳಿಂದ ಈ ರೈಲು ನಿಸ್ಸಂಶಯವಾಗಿ ನೆರವಾಗಿದೆ.

–ರವೀಂದ್ರ ಭಾಕರ್‌, ಪಶ್ಚಿಮ ರೈಲ್ವೆಯ ಮುಖ್ಯ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.