ಪಟ್ನಾ (ಪಿಟಿಐ, ಐಎಎನ್‌ಎಸ್): ಮಿತ್ರಪಕ್ಷ ಬಿಜೆಪಿಯೊಂದಿಗೆ ಜೆಡಿಯು ಮೈತ್ರಿ ಮುರಿದುಕೊಂಡ ಹಿನ್ನೆಲೆಯಲ್ಲಿ ಬುಧವಾರ ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, 126 ಮತಗಳೊಂದಿಗೆ ಜಯ ದಾಖಲಿಸಿದರು.
ವಿಶ್ವಾಸಮತದ ಪರವಾಗಿ ಜೆಡಿಯುನ 117 ಶಾಸಕರಲ್ಲದೆ, ಕಾಂಗ್ರೆಸ್‌ನ ನಾಲ್ವರು, ಸಿಪಿಐನ ಒಬ್ಬರು ಹಾಗೂ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು 126 ಸದಸ್ಯರು ಮತ ಹಾಕಿದರು. ವಿಶ್ವಾಸಮತದ ವಿರುದ್ಧ ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿಯ 22 ಶಾಸಕರು ಮತ್ತು ಇಬ್ಬರು ಪಕ್ಷೇತರರು ಸೇರಿ ಒಟ್ಟು 24 ಸದಸ್ಯರು ಮತ ಚಲಾಯಿಸಿದರು. ಆದರೆ ಏಕೈಕ ಸದಸ್ಯನನ್ನು ಹೊಂದಿರುವ ರಾಮವಿಲಾಸ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಮತ್ತು 91 ಶಾಸಕರಿರುವ ಬಿಜೆಪಿ ಮತದಾನವನ್ನು ಬಹಿಷ್ಕರಿಸಿ ಸಭಾತ್ಯಾಗ ಮಾಡಿದವು.
ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿ ಮಾತನಾಡಿದ ನಿತೀಶ್, `ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದಿಲ್ಲ' ಎಂದು ಘೋಷಿಸಿದರು. ಬಿಜೆಪಿ ಅನುಸರಿಸುತ್ತಿರುವ ವಿಭಜನೆಯ ರಾಜಕೀಯವನ್ನು ಕಟುವಾಗಿ ಟೀಕಿಸಿದ ಅವರು, `ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಾಯಕತ್ವದಲ್ಲಿ ಸಮಾಲೋಚನೆಯ ರಾಜಕಾರಣವನ್ನು ಪಾಲಿಸುತ್ತಿದ್ದ ಬಿಜೆಪಿ, ಈಗ ಅದನ್ನು ತ್ಯಜಿಸಿದೆ' ಎಂದು ದೂಷಿಸಿದರು.
`ದೇಶವು ಜಾತ್ಯತೀತ ನೆಲೆಗಟ್ಟಿನ ಮೇಲೆ ನಿಂತಿದ್ದು, ಧರ್ಮಗಳ ಆಧಾರದಲ್ಲಿ ವಿಭಜನೆಯ ರಾಜಕಾರಣ ಅನುಸರಿಸುವುದನ್ನು ಸಹಿಸಲಾಗದು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವ ಬಿಜೆಪಿಗೆ ಅಧಿಕಾರಕ್ಕೇರುವ ಕನಸು ಫಲಿಸದು' ಎಂದು ಹೇಳಿದರು.
`ಜೆಡಿಯು ಜೊತೆ ಬಿಜೆಪಿ ಚುನಾವಣೆ ಎದುರಿಸಿದರೂ ಎನ್‌ಡಿಎಗೆ 200ಕ್ಕಿಂತ ಹೆಚ್ಚಿನ ಸ್ಥಾನ ಬಾರದು. ಹೀಗಿರುವಾಗ ಬಿಜೆಪಿಯೊಂದೇ ಚುನಾವಣೆಯಲ್ಲಿ ಗೆಲ್ಲುವುದು ಸಾಧ್ಯವಿಲ್ಲದ ಮಾತು' ಎಂದೂ ನುಡಿದರು.
ವಿಶ್ವಾಸಮತದಲ್ಲಿ ತಮ್ಮ ಪರ ಮತ ಚಲಾಯಿಸಿದ ಕಾಂಗ್ರೆಸ್, ಸಿಪಿಐಗೆ ಕೃತಜ್ಞತೆ ಸಲ್ಲಿಸಿದ ಅವರು, ಜೆಡಿಯು ಮತ್ತು ಕಾಂಗ್ರೆಸ್ ನಡುವೆ ಭವಿಷ್ಯದ ನಿಲುವಿನ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ' ಎಂದು ಸ್ಪಷ್ಟಪಡಿಸಿದರು.
ವಿಧಾನಸಭೆಯಿಂದ ಸಭಾತ್ಯಾಗ ಮಾಡಿದ ಬಿಜೆಪಿ ಶಾಸಕರು, ನಿತೀಶ್ ವಿರುದ್ಧ ಮತ್ತು ಮೋದಿ ಪರವಾಗಿ ಘೋಷಣೆ ಕೂಗಿದರು. `ಎನ್‌ಡಿಎಗೆ ಬಹುಮತ ನೀಡಿದ್ದ ರಾಜ್ಯದ ಜನತೆಗೆ ಜೆಡಿಯು ಮೈತ್ರಿ ಮುರಿಯುವ ಮೂಲಕ ದ್ರೋಹ ಬಗೆದಿದೆ' ಎಂದೂ ಆರೋಪಿಸಿದರು.
`ಹೊಸ ಸ್ನೇಹಿತ (ಕಾಂಗ್ರೆಸ್)ನೊಂದಿಗೆ ಕೈಜೋಡಿಸಿರುವ' ನಿತೀಶ್ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನಂದ ಕಿಶೋರ್ ಯಾದವ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, `ಕಾಂಗ್ರೆಸ್ ಮೇಲೆ ದಿಢೀರ್ ಪ್ರೇಮ ಹೇಗೆ ಬೆಳೆಯಿತು' ಎಂದು ಪ್ರಶ್ನಿಸಿದರು. `ತಮ್ಮ ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ ವಿರೋಧಿ ನಿಲುವು ತಳೆದಿದ್ದ ನಿತೀಶ್ ಮತ್ತು ಜೆಡಿಯು, ಈಗ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ಹೊರಟಿದ್ದಾರೆ' ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷವು ವಿಶ್ವಾಸಮತದಲ್ಲಿ ಸರ್ಕಾರವನ್ನು ಬೆಂಬಲಿಸುವ ಮೂಲಕ ಹೊಸ ರಾಜಕೀಯ ಮೈತ್ರಿಗೆ ನಾಂದಿ ಹಾಡಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ನಿತೀಶ್ ಅವರನ್ನು `ಜಾತ್ಯತೀತ ನಾಯಕ'ನೆಂದು ಬಣ್ಣಿಸಿ, ಜೆಡಿಯು ಜೊತೆ ಮೈತ್ರಿ ವ್ಯವಹಾರಕ್ಕೆ ಆಸಕ್ತಿ ತೋರಿದ ಬೆನ್ನಲ್ಲೇ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಹಿಂದುಳಿದ ಬಿಹಾರ ರಾಜ್ಯಕ್ಕೆ ವಿಶೇಷ ಅಭಿವೃದ್ಧಿ ನೆರವು ಪ್ರಕಟಿಸಿದ ನಂತರ ಮುಂಬರುವ ಚುನಾವಣೆಗೆ ಎರಡೂ ಪಕ್ಷಗಳು ಒಂದಾಗುವ ಮುನ್ಸೂಚನೆ ಕಾಣಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.