ADVERTISEMENT

ವೀರಪ್ಪ ಮೊಯಿಲಿಗೆ ‘ಸರಸ್ವತಿ ಸಮ್ಮಾನ್‌’

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2015, 19:30 IST
Last Updated 9 ಮಾರ್ಚ್ 2015, 19:30 IST

ನವದೆಹಲಿ (ಪಿಟಿಐ): ‘ರಾಮಾಯಣ ಮಹಾ­ನ್ವೇಷಣಂ’ ಮಹಾಕಾವ್ಯಕ್ಕಾಗಿ ಕಾಂಗ್ರೆಸ್‌ ಸಂಸದ ಎಂ. ವೀರಪ್ಪ ಮೊಯಿಲಿ ಅವರು ೨೦೧೪ನೇ ಸಾಲಿನ ಸರಸ್ವತಿ ಸಮ್ಮಾನ್‌ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಎರಡನೇ ಕನ್ನಡಿಗ: ಹಿರಿಯ ಸಾಹಿತಿ ಎಸ್.ಎಲ್‌.ಭೈರಪ್ಪ ಅವರ ಬಳಿಕ ಮೊಯಿಲಿ ಅವರು ಸರಸ್ವತಿ ಸಮ್ಮಾನ್‌ಗೆ ಪಾತ್ರರಾಗುತ್ತಿರುವ ಎರಡನೇ ಕನ್ನಡಿಗ. ಭೈರಪ್ಪ ೨೦೧೦ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದರು. ಕೆ.ಕೆ.ಬಿರ್ಲಾ ಪ್ರತಿಷ್ಠಾನ ೧೯೯೧ರಲ್ಲಿ ಸ್ಥಾಪಿಸಿದ ಈ ಪ್ರಶಸ್ತಿಯು ರೂ 10 ಲಕ್ಷ ನಗದು ಒಳಗೊಂಡಿದೆ.

ಐದು ಸಂಪುಟಗಳ ಮಹಾಕಾವ್ಯ: ಸಂಸದ ಎಂ. ವೀರಪ್ಪ ಮೊಯಿಲಿ ಅವರ ‘ರಾಮಾಯಣ ಮಹಾನ್ವೇಷಣಂ’ ಐದು ಸಂಪುಟಗಳ  ಮಹಾಕಾವ್ಯ. ಇದು ೨೦೦೭ರಲ್ಲಿ  ಬಿಡುಗಡೆಯಾಗಿತ್ತು. 

ಈ ಮಹಾಕಾವ್ಯ ಇಂಗ್ಲಿಷ್‌, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಿಗೆ ಅನುವಾದಗೊಂಡಿದೆ.

ಸಮೃದ್ಧ ಭಾಷೆಗೆ ಸಂದ ಗೌರವ

‘ಇದು ಕನ್ನಡಕ್ಕೆ ಸಂದ ಗೌರವ. ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಅತ್ಯಂತ ಸಮೃದ್ಧವಾಗಿದೆ. ಅದರ ಪ್ರತಿನಿಧಿಯಾಗಿ ಈ ಪುರಸ್ಕಾರ ದೊರೆತಿದೆ’ ಎಂದು ವೀರಪ್ಪ ಮೊಯಿಲಿ ಸಂತಸ ವ್ಯಕ್ತಪಡಿಸಿದ್ದಾರೆ.

‘ಬಾಲ್ಯದಿಂದಲೂ ನಾನು ಸಾಹಿತ್ಯ ಓದುವ ಹಾಗೂ ಬರೆಯುವ ಹವ್ಯಾಸ ಮೈಗೂಡಿಸಿಕೊಂಡಿದ್ದೇನೆ. ಕನ್ನಡ ಸಾಹಿತ್ಯ ಒಂದು ಚಿನ್ನದ ಗಣಿ ಇದ್ದಂತೆ. ಕೆದಕಿದಷ್ಟು ಒಳ್ಳೆ ಚಿನ್ನ ಸಿಗುತ್ತದೆ. ಆದರೆ, ಅದರ ಸಂಶೋಧನೆಯನ್ನು ತಪಸ್ಸಿನಂತೆ ಮಾಡಿದರೆ ಪ್ರತಿಫಲ ಖಚಿತ ಎನ್ನುವ ಮಾತಿಗೆ ನಾನೇ ಉದಾಹರಣೆ’ ಎಂದೂ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಪ್ರಸ್ತಾಪಿಸಲಾಗಿರುವ ಭಾರತೀಯ ಭಾಷೆಯ ಶ್ರೇಷ್ಠ ಸಾಹಿತ್ಯ ಕೃತಿಗೆ ವಾರ್ಷಿಕವಾಗಿ ಸರಸ್ವತಿ ಸಮ್ಮಾನ್‌ ಪುರಸ್ಕಾರ ನೀಡಲಾಗುತ್ತಿದ್ದು, ಈ ಸಲ ‘ರಾಮಾಯಣ ಮಹಾನ್ವೇಷಣಂ’ ಕೃತಿಗೆ ದೊರೆತಿದೆ. 

ಕೃತಿಗಳು: ಮೊಯಿಲಿ ಅವರು ನಾಲ್ಕು ಕಾದಂಬರಿಗಳು, ಮೂರು ಕವನ ಸಂಕಲನಗಳು, ಹಲವು ನಾಟಕಗಳು ಹಾಗೂ ಪ್ರಬಂಧಗಳನ್ನು ಬರೆದಿದ್ದಾರೆ.

ಅವರ ಕನ್ನಡ ಕಾದಂಬರಿ ‘ಕೊಟ್ಟ’ ಹಾಗೂ ತುಳು ಕಾದಂಬರಿ ‘ತೆಂಬರೆ’ ಹಿಂದಿ, ಇಂಗ್ಲಿಷ್‌ ಹಾಗೂ ಇನ್ನಿತರ ಭಾಷೆಗಳಿಗೆ ಅನುವಾದಗೊಂಡಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.