
ನವದೆಹಲಿ: ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ತೊರೆದು ಟಿಆರ್‌ಎಸ್ ಸೇರ್ಪಡೆಯಾದ ನಾಯಕರ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ತೀವ್ರ ವಾಗ್ದಾಳಿ ನಡೆಸಿದ್ದು, ವೈಯಕ್ತಿಕ ಲಾಭಕ್ಕಾಗಿ ಕೆಲವು ಮುಖಂಡರು ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.
`ರಾಜಕೀಯವನ್ನು ವ್ಯಾಪಾರವನ್ನಾಗಿ ಮಾಡಿಕೊಳ್ಳುವ ಉದ್ದೇಶವುಳ್ಳವರು ಟಿಆರ್‌ಎಸ್ ಪಕ್ಷ ಸೇರುತ್ತಿರುವುದು ದುರದೃಷ್ಟಕರ' ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಷಾದಿಸಿದ್ದಾರೆ. ಮಕ್ಕಳಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಈ ಮುಖಂಡರು ಕಾಂಗ್ರೆಸ್ ತೊರೆದಿದ್ದಾರೆ ಎಂದೂ ಆಪಾದಿಸಿದ್ದಾರೆ.
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಟಿಆರ್‌ಎಸ್ ಪಕ್ಷಕ್ಕೆ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ.ಕೇಶವರಾವ್ ಹಾಗೂ ಇಬ್ಬರು ಸಂಸದರಾದ ವಿವೇಕಾನಂದ ಮತ್ತು ಮಂಡಾ ಜಗನ್ನಾಥಂ ಅವರು ಕಳೆದ ವಾರ ಸೇರ್ಪಡೆಯಾಗಿದ್ದರು. ಇದು ಕಾಂಗ್ರೆಸ್‌ಗೆ ಬಲವಾದ ಆಘಾತ ಮೂಡಿಸಿದೆ.
`ಈ ಮೂವರು ನಾಯಕರು ತಮಗೆ ಹಾಗೂ ತಮ್ಮ ಮಕ್ಕಳಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡುವಂತೆ ಟಿಆರ್‌ಎಸ್ ಮುಖಂಡರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ' ಎಂದು ಆಂಧ್ರದಲ್ಲಿ ಪಕ್ಷದ ಉಸ್ತುವಾರಿಯನ್ನೂ ವಹಿಸಿಕೊಂಡಿರುವ ಆಜಾದ್ ಆಪಾದಿಸಿದರು.
`ಈ ನಾಯಕರು ತೆಲಂಗಾಣಕ್ಕಾಗಿ ರಾಜೀನಾಮೆ ಕೊಟ್ಟಿಲ್ಲ; ಬದಲಾಗಿ ವೈಯಕ್ತಿಕ ಲಾಭಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ' ಎಂದರು. `ನನ್ನ ಪ್ರಕಾರ ಅವರು ರಾಜಕಾರಣಿಗಳಲ್ಲ. ಇದೊಂದು ರೀತಿ ವ್ಯಾಪಾರ ಇದ್ದಂತೆ. ಪಕ್ಷದ ನೀತಿಗಳನ್ನು ನಂಬಿ, ಜನರ ಸೇವೆ ಮಾಡುವವರನ್ನು ನಾವು ಇಷ್ಟ ಪಡುತ್ತೇವೆ' ಎಂದು ಆಜಾದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.