ADVERTISEMENT

ವ್ಯಕ್ತಿಯ ದೇಹದೊಳಗಿದೆ 150 ಪಿನ್‍ಗಳು; ಇವರು ಕೋಟಾದ 'ಪಿನ್ ಮ್ಯಾನ್'

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 11:00 IST
Last Updated 8 ಜುಲೈ 2017, 11:00 IST
ವ್ಯಕ್ತಿಯ ದೇಹದೊಳಗಿದೆ 150 ಪಿನ್‍ಗಳು; ಇವರು ಕೋಟಾದ 'ಪಿನ್ ಮ್ಯಾನ್'
ವ್ಯಕ್ತಿಯ ದೇಹದೊಳಗಿದೆ 150 ಪಿನ್‍ಗಳು; ಇವರು ಕೋಟಾದ 'ಪಿನ್ ಮ್ಯಾನ್'   

ಕೋಟಾ: ಏಪ್ರಿಲ್ ತಿಂಗಳಲ್ಲಿ ಬದ್ರಿಲಾಲ್ ಮೀನಾ ಅವರನ್ನು ಸಿಟಿ ಸ್ಕ್ಯಾನ್ ಮಾಡಿದಾಗ ಅವರ ದೇಹದಲ್ಲಿ 75 ಪಿನ್‍ಗಳು ಪತ್ತೆಯಾಗಿದ್ದವು. ನಾಲ್ಕು ತಿಂಗಳು, 6 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಬದ್ರಿಲಾಲ್ ಅವರ ದೇಹದಲ್ಲೀಗ 150 ಪಿನ್‍ಗಳಿವೆ. ಅಷ್ಟೊಂದು ಪಿನ್‍ಗಳು ದೇಹವನ್ನು ಸೇರಿಕೊಂಡಿದ್ದು ಹೇಗೆ ಎಂಬುದರ ಬಗ್ಗೆ ಬದ್ರಿಲಾಲ್ ಅವರಿಗೂ ಗೊತ್ತಿಲ್ಲ!.

ಕೋಟಾದ ಬರ್ದಾ ಗ್ರಾಮದ ಬದ್ರಿಲಾಲ್ ಅವರು ಕಳೆದ ವಾರ ಎಐಎಂಎಸ್ ಆಸ್ಪತ್ರೆಯಲ್ಲಿ ಎರಡು ಸರ್ಜರಿಗೊಳಗಾಗಿದ್ದು, ಅವರ ದೇಹದಿಂದ 100 ಪಿನ್‍ಗಳನ್ನು ಹೊರತೆಗೆಯಲಾಗಿತ್ತು. ಆದಾಗ್ಯೂ, ಬದ್ರಿಲಾಲ್ ಅವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಕಾರಣ ಅವರೇ ಸ್ವತಃ ದೇಹಕ್ಕೆ ಪಿನ್ ಚುಚ್ಚಿಕೊಳ್ಳುತ್ತಿರಬಹುದು ಎಂದು ವೈದ್ಯರು ಸಂದೇಹ ವ್ಯಕ್ತ ಪಡಿಸಿದ್ದಾರೆ.

ಆದರೆ ನನ್ನ ದೇಹದಲ್ಲಿ ಪಿನ್ ಹೇಗೆ ಬಂತು ಎಂದು ಗೊತ್ತಿಲ್ಲ ಅಂತಾರೆ ಬದ್ರಿಲಾಲ್. ಅವರ ದೇಹದೊಳಗೆ ಪಿನ್ ಹೇಗೆ ಹೋಯಿತು ಎಂಬುದರ ಬಗ್ಗೆ ನಮಗೂ ತಿಳಿಯುತ್ತಿಲ್ಲ ಎಂದು ಬದ್ರಿಲಾಲ್ ಅವರ ಪತ್ನಿ ಮತ್ತು ಮಗ ಹೇಳಿದ್ದಾರೆ. ಸರ್ಜರಿಗೊಳಗಾಗಿ ಚೇತರಿಸಿಕೊಂಡ  ನಂತರ ಬದ್ರಿಲಾಲ್ ಅವರನ್ನು ಮನೋ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.

ADVERTISEMENT

ಬದ್ರಿಲಾಲ್ ಮೀನಾ ಅವರು ಪಾದ ನೋವು ಮತ್ತು ಸಕ್ಕರೆ ಕಾಯಿಲೆಗೆ ಚಿಕಿತ್ಸೆ ಪಡೆಯಲು ಕೋಟಾದ ಖಾಸಗಿ ಆಸ್ಪತ್ರೆಗೆ ಬಂದಾಗ ದೇಹದಲ್ಲಿ ಪಿನ್ ಇರುವ ವಿಷಯ ಗೊತ್ತಾಗಿತ್ತು. ಆನಂತರ ಬದ್ರಿಲಾಲ್ 6 ಆಸ್ಪತ್ರೆಗಳಿಗೆ ಭೇಟಿ ನೀಡಿದ್ದು, 30 ಕೆಜಿ ತೂಕ ಕಳೆದುಕೊಂಡಿದ್ದಾರೆ.
15 ದಿನಗಳ ಹಿಂದೆ ಬದ್ರಿಲಾಲ್ ಅವರು ಗಂಟಲು ನೋವು ಮತ್ತು ಉಸಿರಾಟ ತೊಂದರೆಗೆ ಚಿಕಿತ್ಸೆ ಪಡೆಯಲು ಏಷ್ಯನ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್  (ಎಐಎಂಎಸ್)ಗೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆಗೆ ಮುನ್ನ ನಡೆದ ಸಿಟಿ ಸ್ಕ್ಯಾನ್‍ನಲ್ಲಿ ಬದ್ರಿಲಾಲ್ ಅವರ ಕುತ್ತಿಗೆಯಲ್ಲಿ ಹಲವಾರು ಪಿನ್‍ಗಳು ಚುಚ್ಚಿಕೊಂಡಿರುವುದು ಕಂಡು ಬಂದಿತ್ತು. ಆತನ ಗಂಟಲು, ಮೊಣಕೈ, ಹೊಟ್ಟೆ ಮತ್ತು ಮೊಣಕಾಲಿನ ಭಾಗಗಳಲ್ಲಿ 150ಕ್ಕಿಂತಲೂ ಹೆಚ್ಚು ಪಿನ್‍ಗಳು ಚುಚ್ಚಿಕೊಂಡಿವೆ. ಇದರಲ್ಲಿ 10 ಪಿನ್‍ಗಳು ಶ್ವಾಸನಾಳ ಮತ್ತು 3 ಅನ್ನನಾಳ, ಒಂದು ಗಂಟಲಿನಲ್ಲಿರುವ ವಾಕ್ತಂತು ಮತ್ತು ಇನ್ನೆರಡು ಕೆರೋಟಿಡ್ ರಕ್ತನಾಳಕ್ಕೆ ಚುಚ್ಚಿಕೊಂಡಿದೆ. ಜೂನ್ 29 ಮತ್ತು ಜುಲೈ 2ರಂಜು ನಡೆದ ಶಸ್ತ್ರ ಚಿಕಿತ್ಸೆಯಲ್ಲಿ  ಕುತ್ತಿಗೆ ಮತ್ತು ಹೊಟ್ಟೆಯಲ್ಲಿದ್ದ  ಪಿನ್‍ಗಳನ್ನು ತೆಗೆಯಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ಹಿಂದೆ ದೆಹಲಿಯ ಉತ್ತರ ರೈಲ್ವೆ ಸೆಂಟ್ರಲ್ ಆಸ್ಪತ್ರೆಯಲ್ಲಿ ಬದ್ರಿಲಾಲ್ ಅವರ  ಕುತ್ತಿಗೆ, ಕೈ ಕಾಲುಗಳಿಂದ 7 ಪಿನ್‍ಗಳನ್ನು ತೆಗೆಲಾಗಿತ್ತು. ಇದೀಗ ಅವರನ್ನು ಮನೋರೋಗ ಚಿಕಿತ್ಸೆಗಾಗಿ ಡಾ. ರಾಮ್ ಮನೋಹರ್ ಲೋಗಿಯಾ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.