ADVERTISEMENT

ಶನಿ ಶಿಲೆಗೆ ಸ್ತ್ರೀ ಸ್ಪರ್ಶ

ಶನಿಶಿಂಗ್ಣಾಪುರ: ಮಹಿಳೆಯರ ಪ್ರವೇಶ ನಿರ್ಬಂಧ ತೆರವು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2016, 19:30 IST
Last Updated 9 ಏಪ್ರಿಲ್ 2016, 19:30 IST
ಶನಿಶಿಂಗ್ಣಾಪುರದ ಶನಿ ಶಿಲೆಗೆ ಶನಿವಾರ ಮಹಿಳೆಯರಿಂದ ಪೂಜೆ  –ಪಿಟಿಐ ಚಿತ್ರ
ಶನಿಶಿಂಗ್ಣಾಪುರದ ಶನಿ ಶಿಲೆಗೆ ಶನಿವಾರ ಮಹಿಳೆಯರಿಂದ ಪೂಜೆ –ಪಿಟಿಐ ಚಿತ್ರ   

ಅಹಮದ್‌ನಗರ (ಪಿಟಿಐ):  ಮಹಾರಾಷ್ಟ್ರದ ಪ್ರಸಿದ್ಧ  ಶನಿ ಶಿಂಗ್ಣಾಪುರ ಬಯಲು ದೇವಾಲಯದಲ್ಲಿ  ಮಹಿಳೆಯರಿಗಿದ್ದ ನಿರ್ಬಂಧ ತೆರವುಗೊಳಿಸಿದ ಮಾರನೇ ದಿನವಾದ ಶನಿವಾರ, ಸಾವಿರಾರು ಮಹಿಳಾ ಭಕ್ತರು ನೇರವಾಗಿ ಶನಿ ಶಿಲೆಯನ್ನು ಮುಟ್ಟಿ ಪೂಜೆ ಸಲ್ಲಿಸಿದರು.

ಸುಮಾರು ನಾಲ್ಕು ಶತಮಾನಗಳಿಂದ   ಮಹಿಳೆಯರ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಬಾಂಬೆ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ದೇವಾಲಯದ ಆಡಳಿತ ಮಂಡಳಿಯು ಯುಗಾದಿಯ ದಿನ ತೆರವುಗೊಳಿಸಿತ್ತು.

ದೇವಾಲಯದಲ್ಲಿ ಲಿಂಗ ಸಮಾನತೆಗೆ ಆಗ್ರಹಿಸಿ ಭೂಮಾತಾ ಬ್ರಿಗೇಡ್‌ ಸಂಘಟನೆ ಮೂರು ತಿಂಗಳುಗಳಿಂದ ಬೃಹತ್‌ ಚಳವಳಿ ಕೂಡ ನಡೆಸುತ್ತಿತ್ತು.
ದೇವಳ ಟ್ರಸ್ಟ್‌ ಶುಕ್ರವಾರ ತನ್ನ ನಿರ್ಧಾರವನ್ನು ಪ್ರಕಟಿಸುತ್ತಲೇ, ಕೆಲವು ಮಹಿಳಾ ಭಕ್ತರು ಶನಿ ಶಿಲೆ ಇರುವ ಕಟ್ಟೆ ಏರಿ ಸ್ಪರ್ಶಿಸಿ ಪೂಜೆ ಸಲ್ಲಿಸಿದ್ದರು.
ಭೂಮಾತಾ ಬ್ರಿಗೇಡ್‌ನ ನಾಯಕಿ ತೃಪ್ತಿ ದೇಸಾಯಿ ಕೂಡ ದೇವಾಲಯಕ್ಕೆ ಭೇಟಿ ನೀಡಿ ಶನಿ ದೇವರಿಗೆ ಪೂಜೆ ಸಲ್ಲಿಸಿದರು.

ತೈಲಾಭಿಷೇಕ:  ನಿರ್ಬಂಧಿತ ಪ್ರದೇಶವಾಗಿದ್ದ ಶಿಲೆಯ ಬಳಿಗೆ ತೆರಳಲು ಅವಕಾಶ ನೀಡಿದ್ದು ಮಹಿಳಾ ಭಕ್ತರ ಸಂತಸವನ್ನು ಇಮ್ಮಡಿಗೊಳಿಸಿತ್ತು.
ಶನಿ ದೇವರಿಗೆ ವಿಶೇಷ ದಿನವಾದ ಶನಿವಾರ ಭಾರಿ ಸಂಖ್ಯೆಯಲ್ಲಿ ಬಯಲು ಆಲಯಕ್ಕೆ ಭೇಟಿ ನೀಡಿದ ಮಹಿಳೆಯರು ಪುರಾತನ ಶಿಲೆಗೆ ತೈಲ ಅಭಿಷೇಕ ನಡೆಸಿದರು.

ಭಾವನೆಗಳಿಗೆ ಧಕ್ಕೆ: ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿಂಗ್ಣಾಪುರದ ಸರ್‌ಪಂಚ್‌ (ಮುಖ್ಯಸ್ಥ) ಬಾಳಸಾಹೇಬ್‌ ಬಾನಕರ್‌, ‘ಈ ನಿರ್ಧಾರದಿಂದಾಗಿ ಗ್ರಾಮಸ್ಥರ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ದೇವಾಲಯದ ಪಾವಿತ್ರ್ಯವನ್ನು ರಕ್ಷಿಸುವುದಕ್ಕಾಗಿ ಶತಮಾನಗಳಿಂದ ಅನುಸರಿಸಿಕೊಂಡು ಬಂದಿದ್ದ ಸಂಪ್ರದಾಯ ಮುರಿಯಲಾಗಿದೆ’ ಎಂದು  ತಿಳಿಸಿದ್ದಾರೆ.

‘ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದು ಮಹಿಳೆಯರ ಮೂಲಭೂತ ಹಕ್ಕು. ಅದನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ’ ಎಂದು ಬಾಂಬೆ ಹೈಕೋರ್ಟ್‌ ಏಪ್ರಿಲ್‌ 1ರಂದು ಅಭಿಪ್ರಾಯಪಟ್ಟಿತ್ತು.

ಶನಿ ಶಿಂಗ್ಣಾಪುರ ಬಯಲು ದೇವಾಲಯದಲ್ಲಿ ಶಿಲೆ ಸ್ಪರ್ಶಿಸಿ ಪೂಜೆ ಸಲ್ಲಿಸುವುದಕ್ಕೆ ಮಹಿಳೆಯರಿಗೂ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತ್ತು.

ನಿರ್ಧಾರಕ್ಕೆ ಶ್ಲಾಘನೆ: ಶನಿ ಶಿಂಗ್ಣಾಪುರ  ದೇವಾಲಯದ ಆಡಳಿತ ಮಂಡಳಿಯ ನಿರ್ಧಾರವನ್ನು ಮಹಾರಾಷ್ಟ್ರದ ಮಹಿಳಾ ಮುಖಂಡರು ಶ್ಲಾಘಿಸಿದ್ದಾರೆ.
ನಿರ್ಧಾರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಪತ್ನಿ ಅಮೃತಾ ಫಡಣವೀಸ್ ಅವರು ಸ್ವಾಗತಿಸಿದ್ದಾರೆ.

‘ಇದು ಅತ್ಯಂತ ತೃಪ್ತಿದಾಯಕ ಬೆಳವಣಿಗೆ. ಪುರುಷರಂತೆ ಮಹಿಳೆಯರೂ ಕೂಡ ಎಲ್ಲ    ನ್ಯಾಯಯುತ ಪ್ರಯೋಜನಗಳನ್ನು ಪಡೆಯಲು ಅರ್ಹರು ಎಂಬ ಪ್ರಬಲ ಸಂದೇಶವನ್ನು ಇದು ರವಾನಿಸಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

‘ಶನಿ ಶಿಂಗ್ಣಾಪುರದಲ್ಲಿ ಮಹಿಳೆಯರೂ ಶಿಲೆ ಸ್ಪರ್ಶಿಸಿ ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ ಎಂದು ತಿಳಿದು ಸಂತಸವಾಗಿದೆ.  ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ವಿಚಾರದಲ್ಲಿ ಇದು ಅತ್ಯಂತ ಮಹತ್ವಪೂರ್ಣ ಬೆಳವಣಿಗೆಯಾಗಿದೆ’ ಎಂದು ಮಹಾರಾಷ್ಟ್ರ ದ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹಾತ್ಕರ್‌  ಅವರು ಬಣ್ಣಿಸಿದ್ದಾರೆ.

ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ವಕೀಲೆ ಅಭಾ ಸಿಂಗ್‌ ಅವರು ಐತಿಹಾಸಿಕ ತೀರ್ಪು ನೀಡಿದ ಬಾಂಬೆ ಹೈಕೋರ್ಟ್‌ಗೆ ಧನ್ಯವಾದ ಸಲ್ಲಿಸಿದ್ದಾರೆ.

ಮೊದಲ ದರ್ಶನ
ಟ್ರಸ್ಟ್‌ನ ನಿರ್ಧಾರ ಹೊರಬೀಳುತ್ತಲೇ, ಪ್ರಿಯಾಂಕಾ ಜಗತ್‌ ಮತ್ತು ಪುಷ್ಪಕ್‌ ಕೆವಾಡ್ಕರ್‌ ಎಂಬ ಇಬ್ಬರು ಹೋರಾಟಗಾರ್ತಿಯರು ನಿರ್ಬಂಧಿತ ಪ್ರದೇಶಕ್ಕೆ ತೆರಳಿ ಮೊದಲಿಗೆ ಶನಿ ಶಿಲೆ ಮುಟ್ಟಿ  ಪೂಜಿಸಿದರು.

ತೃಪ್ತಿ ದೇಸಾಯಿ ಅವರ ಭೂಮಾತಾ ಬ್ರಿಗೇಡ್‌ನಿಂದ ಹೊರ ಬಂದಿದ್ದ ಈ ಇಬ್ಬರು ಒಟ್ಟಾಗಿ ಸೇರಿ ‘ಸ್ವರಾಜ್‌’ ಬ್ರಿಗೇಡ್‌ ಎಂಬ ಸಂಘಟನೆ ಸ್ಥಾಪಿಸಿದ್ದರು. ತೃಪ್ತಿ ದೇಸಾಯಿ   ಪ್ರಚಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಆ ಹೋರಾಟ ಅವರನ್ನೇ ಕೇಂದ್ರಿತವಾಗಿದೆ  ಎಂದು ಇಬ್ಬರೂ ಆರೋಪಿಸಿದ್ದರು.

‘ಮುಟ್ಟಾದಾಗ ಪ್ರವೇಶ ನಿರ್ಬಂಧಿಸಿ’
ಶಿರಡಿ (ಪಿಟಿಐ): ಎಲ್ಲ ದೇವಾಲಯಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು. ಮುಟ್ಟಿನ ಸಂದರ್ಭದಲ್ಲಿ ಮಾತ್ರ ಅವರ ಪ್ರವೇಶವನ್ನು ನಿರ್ಬಂಧಿಸಬಹುದು ಎಂದು ವಿಶ್ವ ಹಿಂದೂ ಪರಿಷತ್‌ ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ.

ADVERTISEMENT

ಶಿರಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರಿಗೆ ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧಿಸುವುದು ತಪ್ಪು’ ಎಂದು ಹೇಳಿದ್ದಾರೆ.

‘ಮಹಿಳೆಯರು ಮುಟ್ಟಾಗುವ ಸಂದರ್ಭದಲ್ಲಿ ಪ್ರತಿ ತಿಂಗಳು ಐದು ದಿನಗಳ ಕಾಲ ದೇವಾಲಯ ಪ್ರವೇಶಕ್ಕೆ ಅವರನ್ನು ನಿರ್ಬಂಧಿಸಬಹುದಾಗಿದೆ’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಎಸೆಯಬೇಕು: ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಲು ಹಿಂದೇಟು ಹಾಕಿದವರ  ವಿರುದ್ಧ ಹರಿಹಾಯ್ದ ಅವರು, ‘ಘೋಷಣೆ ಕೂಗದವರನ್ನು ದೇಶದ ಹೊರಗೆ ಅಥವಾ ಹಿಂದೂ ಮಹಾ ಸಾಗರಕ್ಕೆ ಎಸೆಯಬೇಕು’ ಎಂದು ಕಿಡಿ ಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.