ADVERTISEMENT

ಶಶಿಕಲಾ ಸಹೋದರನ ಹೊಸ ಪಕ್ಷ

ಪಿಟಿಐ
Published 10 ಜೂನ್ 2018, 19:30 IST
Last Updated 10 ಜೂನ್ 2018, 19:30 IST

ಮನ್ನಾರ್‌ಗುಡಿ, (ತಮಿಳುನಾಡು): ವಿ.ಕೆ. ಶಶಿಕಲಾ ಅವರ ಸಹೋದರ ವಿ. ದಿವಾಕರನ್ ಭಾನುವಾರ ಹೊಸ ಪಕ್ಷ ಸ್ಥಾಪಿಸಿದ್ದಾರೆ.

ಇತ್ತೀಚೆಗೆ ‘ಅಮ್ಮ ಮಕ್ಕಳ್‌ ಮುನ್ನೇತ್ರ ಕಳಗಂ’ (ಎಎಂಎಂಕೆ) ಹೆಸರಿನ ನೂತನ ಪಕ್ಷ ಸ್ಥಾಪಿಸಿರುವ ತಮ್ಮ ಸೋದರಳಿಯ ಟಿಟಿವಿ ದಿನಕರನ್‌ ಅವರ ಜತೆ ಮನಸ್ತಾಪ ಹೊಂದಿರುವ ದಿವಾಕರನ್‌, ‘ಅಣ್ಣಾ ದ್ರಾವಿಡಾರ್ ಕಳಗಂ’ (ಎಡಿಕೆ) ಹೆಸರಿನ ಪಕ್ಷವನ್ನು ಹುಟ್ಟು ಹಾಕಿದ್ದಾರೆ.

ಕೆಂಪು ಮತ್ತು ಕಪ್ಪು ಪಟ್ಟಿಗಳ ನಡುವೆ, ಎಐಎಡಿಎಂಕೆಯ ದಿವಂಗತ ನಾಯಕಿ ಜಯಲಲಿತಾ ಅವರ ನೆಚ್ಚಿನ ಬಣ್ಣವಾದ ಹಸಿರು ಬಣ್ಣದ ನಕ್ಷತ್ರ ಇರುವ ಧ್ವಜವನ್ನು ಎಡಿಕೆ ಪಕ್ಷ ಹೊಂದಿದೆ.

ADVERTISEMENT

ದಿವಾಕರನ್‌ ಅವರಿಗೆ ಇತ್ತೀಚೆಗೆ ಶಶಿಕಲಾ, ನೋಟಿಸ್ ಕಳುಹಿಸಿದ್ದರು.

**

ತಿದ್ದುಪಡಿ ನಿಯಮಾವಳಿಗೆ ಅನುಮತಿ

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ತಿದ್ದುಪಡಿ ನಿಯಮಾವಳಿಗೆ ಚುನಾವಣಾ ಆಯೋಗ ಸಮ್ಮತಿ ಸೂಚಿಸಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಹೊಂದಿದ್ದ ಮಹತ್ವದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಕೈಬಿಟ್ಟು ನಿಯಮಾವಳಿಯನ್ನು ರೂಪಿಸಲಾಗಿದೆ. ಸಂಯೋಜಕ ಮತ್ತು ಜಂಟಿ ಸಂಯೋಜಕ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಪ್ರಸ್ತುತ, ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಮತ್ತು ಉಪಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಕ್ರಮವಾಗಿ ಈ ಹುದ್ದೆಗಳನ್ನು ಹೊಂದಿದ್ದಾರೆ.

‘ಪುರುಚ್ಚಿ ತಲೈವಿ ಡಾ. ಜೆ.ಜಯಲಲಿತಾ ಅವರು ಪಕ್ಷದ ಚಿರಂತನ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯುವುದರಿಂದ, ಬೇರೆ ಯಾವುದೇ ವ್ಯಕ್ತಿಯನ್ನು ಆ ಸ್ಥಾನಕ್ಕೆ ಆಯ್ಕೆ ಅಥವಾ ನೇಮಕ ಮಾಡುವುದಿಲ್ಲ. ಪಕ್ಷದ ಸದಸ್ಯರ ಆಶಯದಂತೆ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಎಐಎಡಿಎಂಕೆ ತಿಳಿಸಿದೆ.

ತಿದ್ದುಪಡಿ ನಿಯಮಾವಳಿಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಪಕ್ಷದ ಹಿರಿಯ ಮುಖಂಡರು ಆಯೋಗದ ಕ್ರಮವನ್ನು ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.