ನವದೆಹಲಿ (ಪಿಟಿಐ): ಚೀನಾ ಮತ್ತು ಪಾಕಿಸ್ತಾನಕ್ಕಿಂತಲೂ ಮೂರು ಪಟ್ಟು ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ಭಾರತ ವಿಶ್ವದಲ್ಲಿ ಅತಿ ದೊಡ್ಡ ಶಸ್ತ್ರ ಖರೀದಿ ರಾಷ್ಟ್ರವಾಗಿದೆ ಎಂದು ಸ್ವೀಡನ್ ಸಂಶೋಧನಾ ಸಂಸ್ಥೆಯು ಅಭಿಪ್ರಾಯಪಟ್ಟಿದೆ.
ಸ್ಟಾಕ್‌ಹೋಂ ಇಂಟರ್‌ನ್ಯಾಷನಲ್ ಪೀಸ್ ರೀಸರ್ಚ್ ಸಂಸ್ಥೆಯು ಸಂಗ್ರಹಿಸಿರುವ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ಸಾಗಾಟ ಅಂಕಿಸಂಖ್ಯೆಗಳ ಪ್ರಕಾರ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಚೀನಾ ಮತ್ತು ಪಾಕಿಸ್ತಾನ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಇವೆ. 2008ರಿಂದ 2013ರ ಅವಧಿಯಲ್ಲಿ ಭಾರತದ ಶಸ್ತ್ರಾಸ್ತ್ರ ಖರೀದಿಯ ಪ್ರಮಾಣವು ಶೇಕಡಾ 111ರಷ್ಟು ಏರಿಕೆಯಾಗಿದೆ.
ಭಾರತಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡುವಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿ ಇದೆ. ಶೇಕಡಾ 75ರಷ್ಟು ರಷ್ಯಾದಿಂದ ಮತ್ತು ಶೇಕಡಾ 7ರಷ್ಟು ಅಮೆರಿಕದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅಮೆರಿಕ ಮತ್ತು ಚೀನಾ ಮಧ್ಯೆ ಶಸ್ತ್ರಾಸ್ತ್ರ ಮಾರಾಟಕ್ಕೆ ಪೈಪೋಟಿ ಇದೆ ಎಂದು ಅಧ್ಯಯನ ವರದಿ ತಿಳಿಸಿದೆ.