ADVERTISEMENT

ಶಸ್ತ್ರಾಸ್ತ್ರ ತಯಾರಿಕಾ ಘಟಕ ಸ್ಥಾಪಿಸಿದ್ದ ಭಟ್ಕಳ

ನ್ಯಾಟೊ ಪಡೆಗಳ ವಿರುದ್ಧ ಹೋರಾಟಕ್ಕೂ ಸಿದ್ಧನಾಗಿದ್ದ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಅಮೆರಿಕಾದ ಮೇಲೆ ನಡೆದ 9/11ರ ದಾಳಿಯ ಬಳಿಕ ಅಪಘಾನಿಸ್ತಾನದ ವಿರುದ್ಧ ಕಾರ್ಯಾಚರಣೆ ಕೈಗೊಂಡ ನ್ಯಾಟೊ ಪಡೆಗಳ ವಿರುದ್ಧ ತನ್ನ 18ನೇ ವಯಸ್ಸಿನಲ್ಲೇ ಹೋರಾಡಲು ಬಂಧಿತ ಯಾಸೀನ್ ಭಟ್ಕಳ ಬಯಸಿದ್ದ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

`ಅಪಘಾನಿಸ್ತಾನದ ವಿರುದ್ಧ ಅಮೆರಿಕಾ ದಾಳಿ ನಡೆಸಿದ ನಂತರ ಈತ ಅಪಘಾನಿಸ್ತಾನಕ್ಕೆ ಹೋಗಿ  ನ್ಯಾಟೊ ಪಡೆಗಳ ವಿರುದ್ಧ ಹೋರಾಡಲು ಇಚ್ಛಿಸಿದ್ದ' ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ನಾನು ನೋಡಿದಂತೆ ಭಟ್ಕಳ  `ಅತಿಯಾದ ಪ್ರಚೋದನೆ'ಗೊಳಗಾದ ಮತ್ತು `ತುಂಬಾ ಮಹತ್ವಾಕಾಂಕ್ಷೆ'ಯುಳ್ಳವನಾಗಿದ್ದಾನೆ. ಆತ ದೆಹಲಿ ಹೊರವಲಯದಲ್ಲಿರುವ ನಂಗ್ಲೊಯ್‌ನಲ್ಲಿ ಶಸ್ತ್ರಾಸ್ತ್ರ ತಯಾರಿಕಾ ಘಟಕವೊಂದನ್ನು 2011ರಲ್ಲಿ ಸ್ಥಾಪಿಸಿದ್ದ” ಎಂದು ತಮ್ಮ ಸೇವಾವಧಿಯ ಬಹುತೇಕ ದಿನಗಳನ್ನು ಬಂಧಿತ ಉಗ್ರರ ವಿಚಾರಣೆಯಲ್ಲೇ ಕಳೆದಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

`ಆತ ಎಲ್‌ಎಮ್‌ಜಿ (ಲೈಟ್ ಮಶೀನ್ ಗನ್) ಮತ್ತು ರಾಕೆಟ್ ಉಡಾವಣೆ ಸಾಧನಗಳು ದೆಹಲಿಯಲ್ಲಿ ತಯಾರು ಮಾಡುವ ಯೋಜನೆ ಹಾಕಿದ್ದ. ಆತ ಎಷ್ಟು ಮಹತ್ವಾಕಾಂಕ್ಷೆ ಹೊಂದಿದ್ದ ಎನ್ನುವುದಕ್ಕೆ ಇಷ್ಟು ಪುರಾವೆಗಳು ಸಾಕು' ಎಂದು ಅಧಿಕಾರಿ ಹೇಳಿದ್ದಾರೆ.

ದೆಹಲಿ ವಿಶೇಷ ಘಟಕದ ಪೊಲೀಸರು 2011ರಲ್ಲಿ ನಂಗ್ಲೊಯ್‌ನಲ್ಲಿ ಸಮೀಪದ ಮೀರ್ ವಿಹಾರ ಬಳಿ ಈ ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆ ಪತ್ತೆಹಚ್ಚಿದ್ದರು.

ಈ ಶಸ್ತ್ರಾಸ್ತ್ರ ಘಟಕ ಯಂತ್ರೋಪಕರಣಗಳಿಂದ ಕೂಡಿತ್ತು. ಇದು ಕೇವಲ ಶಸ್ತ್ರಾಸ್ತ್ರಗಳನ್ನು ತಯಾರು ಮಾಡುವ ಕಾರ್ಖಾನೆ ಆಗಿರಲಿಲ್ಲ. ಅಲ್ಲಿ ಎಲ್‌ಎಮ್‌ಜಿ ಮತ್ತು ರಾಕೆಟ್ ಉಡಾವಣೆಗೆ ಅಗತ್ಯವಿರುವ ಬಿಡಿಭಾಗಗಳನ್ನೂ ಸಿದ್ಧಪಡಿಸುವ ಸಾಮರ್ಥ್ಯವನ್ನೂ ಘಟಕ ಹೊಂದಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

ಮೋಲ್ಡಿಂಗ್, ಲೇಥ್, ಕಟ್ಟಿಂಗ್, ಡ್ರಿಲ್ಲಿಂಗ್, ಗ್ರೈಡಿಂಗ್ ಯಂತ್ರಗಳಲ್ಲದೆ ಸ್ಫೋಟಕಗಳು ಮತ್ತು ಕಬ್ಬಿಣದ ಚೂರುಗಳು ಆ ಘಟಕದಲ್ಲಿತ್ತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ನವೆಂಬರ್ 22, 2011ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳನ ಮೇಲೆ ಎಫ್‌ಐಆರ್ ದಾಖಲಾಗಿದೆ. ಶಸ್ತ್ರಾಸ್ತ್ರ ಕಾರ್ಖಾನೆ ಸ್ಥಾಪನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.