ADVERTISEMENT

ಶಸ್ತ್ರಾಸ್ತ್ರ ಸಾಗಾಟ ಶಂಕೆ: ಪಶ್ಚಿಮ ಕರಾವಳಿಯಲ್ಲಿ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ನವದೆಹಲಿ (ಪಿಟಿಐ): ದೇಶದ ಪಶ್ಚಿಮ ಕರಾವಳಿಯಲ್ಲಿ ಶಸ್ತ್ರಾಸ್ತ್ರ ಹೊತ್ತ ಹಡಗು ಸಂಚರಿಸುತ್ತಿದೆ ಎಂಬ ಸುಳಿವು ದೊರೆತ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟೆಚ್ಚರ ವಹಿಸುವಂತೆ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗಳಿಗೆ ಸೂಚಿಸಿದೆ. 

ಮುಂಬೈ ದಾಳಿಯ ನಂತರ ಮತ್ತೊಂದು ಅಂತಹ ದಾಳಿಗೆ ಸಜ್ಜಾಗಿರುವ ಉಗ್ರರು ಜಲ ಮಾರ್ಗದ ಮೂಲಕ ಶಸ್ತ್ರಾಸ್ತ್ರಗಳನ್ನು ದೇಶದೊಳಗೆ ಸಾಗಿಸಲು ಯತ್ನಿಸುತ್ತಿರಬಹುದು ಎಂಬ ಶಂಕೆಯನ್ನು ಕೇಂದ್ರ ಭದ್ರತಾ ಸಂಸ್ಥೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಹಡಗು ಅಂತರ ರಾಷ್ಟ್ರೀಯ ಶಸ್ತ್ರಾಸ್ತ್ರ ಕಳ್ಳಸಾಗಾಟದಾರರ ಮಾಫಿಯಾಗೆ ಸೇರಿರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ವಿಷಯವನ್ನು ಇತರ ಭದ್ರತಾ ಸಂಸ್ಥೆಗಳ ಗಮನಕ್ಕೂ ಈಗಾಗಲೇ ತರಲಾಗಿದೆ ಎಂದು ತಿಳಿದುಬಂದಿದೆ. 

ಹಡಗಿನ ಬಗ್ಗೆ ಸುಳಿವು ನೀಡಿದ್ದು ಅನಾಮಧೇಯ ಉಪಗ್ರಹ ದೂರವಾಣಿ ಕರೆ. ಗುಜರಾತ್ ಕರಾವಳಿಯ ಕಛ್‌ನಿಂದ ಡಿ.31ರಂದು ಹಡಗೊಂದರ ಉಪಗ್ರಹ ದೂರವಾಣಿ ಮೂಲಕ ಅಪರಿಚಿತನೊಬ್ಬ ಅಮೆರಿಕದ ವ್ಯಕ್ತಿಯೊಂದಿಗೆ ನಡೆಸಿದ ಮಾತುಕತೆಯಿಂದ ಈ ವಿವರ ಬಹಿರಂಗವಾಗಿದೆ.

ಅಮೆರಿಕದ ದೂರವಾಣಿ ಸಂಖ್ಯೆಯಲ್ಲಿ ಕರೆಯನ್ನು ಸ್ವೀಕರಿಸಿದ ವ್ಯಕ್ತಿ ಶಸ್ತ್ರಾಸ್ತ್ರಗಳನ್ನು ಹೊತ್ತ ಹಡಗು, ಶಸ್ತ್ರಾಸ್ತ್ರಗಳ ವಿವರ ಮತ್ತು ಭಾರತದ ಕರಾವಳಿಯಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ವಿಚಾರಿಸಿದ್ದಾನೆ. ಇಬ್ಬರ ನಡುವೆ ಆಂಗ್ಲ ಭಾಷೆಯಲ್ಲಿ ಸುಮಾರು 232 ಸೆಕೆಂಡ್ ನಡೆದ ದೂರವಾಣಿ ಸಂಭಾಷಣೆಯನ್ನು ಕೇಂದ್ರ ಭದ್ರತಾ ಸಂಸ್ಥೆ ಆಲಿಸಿದೆ.   

ಪಶ್ಚಿಮ ಕರಾವಳಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸುವಂತೆ ಕೇಂದ್ರ ಸರ್ಕಾರ ಕರಾವಳಿ ಕಾವಲು ಪಡೆ ಮತ್ತು ನೌಕಾದಳ ಸಿಬ್ಬಂದಿಗೆ ಸೂಚಿಸಿದೆ. ಗುಜರಾತ್ ಮತ್ತು ಮಹಾರಾಷ್ಟ್ರ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಸ್ತು ತೀವ್ರಗೊಳಿಸಿರುವ ಪಡೆಗಳು ಪ್ರತಿ ಹಡಗು ಮತ್ತು ಮೀನುಗಾರರ ಚಲನವಲನದ ಮೇಲೆ ಕಣ್ಣಿಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.