ADVERTISEMENT

ಶಿಕ್ಷಣ ಮಾಧ್ಯಮ: ಸಂವಿಧಾನ ಪೀಠಕ್ಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 19:59 IST
Last Updated 5 ಜುಲೈ 2013, 19:59 IST

ನವದೆಹಲಿ: `ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳ ಮೇಲೆ ಮಾತೃಭಾಷೆ ಇಲ್ಲವೆ ಪ್ರಾದೇಶಿಕ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಹೇರಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆಯೇ ಎನ್ನುವ ಪ್ರಶ್ನೆಯನ್ನು ಸಂವಿಧಾನ ಪೀಠವೇ ಇತ್ಯರ್ಥಪಡಿಸಲಿ' ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.

`ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ ಶಿಕ್ಷಣ ಮಾಧ್ಯಮವು ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅಲ್ಲದೆ, ಇದು ಈಗಿನ ಪೀಳಿಗೆಯಷ್ಟೇ ಅಲ್ಲ, ಮುಂದೆ ಹುಟ್ಟಲಿರುವ ಹೊಸ ಪೀಳಿಗೆ ಮಕ್ಕಳ ಮೂಲಭೂತ ಹಕ್ಕಿನ ಪ್ರಶ್ನೆಯನ್ನೂ ಒಳಗೊಂಡಿರುವುದರಿಂದ ಸಂವಿಧಾನ ಪೀಠವೇ ಈ ಪ್ರಕರಣ ಕುರಿತು ವಿಚಾರಣೆ ನಡೆಸುವುದು ಸೂಕ್ತ' ಎಂದು ಸುಪ್ರೀಂ     ಕೋರ್ಟ್ ಹೇಳಿದೆ.

`ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಶಿಕ್ಷಣ ಮಾಧ್ಯಮ ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಹಸ್ತಕ್ಷೇಪ ಮಾಡಲು 1993ರಲ್ಲಿ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ನಿರಾಕರಿಸಿರುವ ಹಿನ್ನೆಲೆಯಲ್ಲಿ ಶಿಕ್ಷಣ ಮಾಧ್ಯಮದ ವಿವಾದಕ್ಕೆ ಸಂಬಂಧಿಸಿದ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸುವುದು ಸೂಕ್ತ' ಎಂದು ನ್ಯಾ. ಪಿ. ಸದಾಶಿವಂ ಹಾಗೂ ನ್ಯಾ. ರಂಜನ್ ಗೋಗಾಯ್ ಅವರನ್ನೊಳಗೊಂಡ ಪೀಠ ತಿಳಿಸಿದೆ.

`ಇಂಗ್ಲಿಷ್ ಮಾಧ್ಯಮದ ಮಕ್ಕಳು ಮತ್ತು ಪೋಷಕರು ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಶಿಕ್ಷಣ ಮಾಧ್ಯಮ ಮಾತೃಭಾಷೆಯೇ ಆಗಿರಬೇಕೇ ಎನ್ನುವ ವಿಷಯದಲ್ಲಿ ಈಗಾಗಲೇ ಖಚಿತವಾದ ತೀರ್ಪು ನೀಡಿದೆ.

ಈ ಹಿನ್ನೆಲೆಯಲ್ಲಿ ಇದೇ ಪ್ರಕರಣವನ್ನು ಅಷ್ಟೇ ಸಂಖ್ಯೆಯ ನ್ಯಾಯಮೂರ್ತಿಗಳು ಈಗ ವಿಭಿನ್ನ ಕಾರಣದ ಮೇಲೆ ವಿಚಾರಣೆ ನಡೆಸುವುದು ಉಚಿತವಲ್ಲ' ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

`ಪ್ರಾಥಮಿಕ ಶಾಲಾ ಹಂತದಲ್ಲಿ ಶಿಕ್ಷಣ ಮಾಧ್ಯಮ ಆಯ್ಕೆ ಮಾಡಿಕೊಳ್ಳುವ ಅಧಿಕಾರ ಮಕ್ಕಳಿಗೆ, ಅವರ ಪೋಷಕರಿಗೆ ಅಥವಾ ನಾಗರಿಕರಿಗೆ ಇದೆ ಎನ್ನುವ ಪ್ರತಿವಾದಿಗಳ ವಾದವನ್ನು ನಾವು ಒಪ್ಪಿಕೊಂಡರೆ ಇಂಗ್ಲಿಷ್ ಮಾಧ್ಯಮದ ಮಕ್ಕಳು ಹಾಗೂ ಅವರ ಪೋಷಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ಎತ್ತಿ ಹಿಡಿದಿರುವ ಮಾತೃಭಾಷೆ ಶಿಕ್ಷಣ ಮಾಧ್ಯಮದ ತೀರ್ಪಿಗೆ ವಿರುದ್ಧವಾಗಲಿದೆ' ಎಂದು ನ್ಯಾಯಪೀಠ ವಿಶ್ಲೇಷಿಸಿದೆ. ಅಲ್ಲದೆ, ಈ ಪ್ರಕರಣದಲ್ಲಿ ದೇಶದ ಮುಂದಿನ ಪ್ರಜೆಗಳ ಬೆಳವಣಿಗೆಗೆ ಸಂಬಂಧಿಸಿದ ಮಹತ್ವದ ಪ್ರಶ್ನೆಯೂ ಅಡಗಿದೆ' ಎಂದು ನ್ಯಾಯಾಲಯ ವ್ಯಾಖ್ಯಾನಿಸಿದೆ. `ಪ್ರತಿಯೊಬ್ಬ ಮಕ್ಕಳ ಬದುಕಿನಲ್ಲಿ ಪ್ರಾಥಮಿಕ ಶಿಕ್ಷಣ ಅತ್ಯಂತ ಪ್ರಮುಖ ಘಟ್ಟ. ಇದರ ಮೇಲೇ ಮಕ್ಕಳ ಭವಿಷ್ಯದ ಕಲಿಕೆ ಮತ್ತು ಯಶಸ್ಸು ಅವಲಂಬಿಸಿದೆ.

ಪುಟಾಣಿಗಳ ಆಲೋಚನಾ ಪ್ರಕ್ರಿಯೆ-ಸಂವಹನ ಕೌಶಲಕ್ಕೆ ಆರಂಭಿಕ ಶಿಕ್ಷಣ ಅಡಿಪಾಯ ಒದಗಿಸಲಿದೆ. ಈ ಹಿನ್ನೆಲೆಯಲ್ಲಿ ಭಾಷೆ ಮಹತ್ವ ಕಡೆಗಣಿಸಲಾಗದು. ರಾಜ್ಯಗಳ ಪುನರ್‌ವಿಂಗಡಣೆ ಆಗಿರುವುದು ಭಾಷಾವಾರು ಆಧಾರದಲ್ಲಿ ಎನ್ನುವುದನ್ನು ಮರೆಯಬಾರದು' ಎಂದು ನ್ಯಾಯಪೀಠ ವಿವರಿಸಿದೆ. ಈ ಕಾರಣಗಳಿಂದ ಪ್ರಕರಣದ ವಿಚಾರಣೆಯನ್ನು ಸಂವಿಧಾನ ಪೀಠ ನಡೆಸುವುದೇ ಒಳಿತು ಎನ್ನುವ ಖಚಿತ ನಿಲುವನ್ನು ನ್ಯಾಯಮೂರ್ತಿಗಳು ತಳೆದಿದ್ದಾರೆ. ಸಂವಿಧಾನ ಪೀಠದ ಪರಿಶೀಲನೆಗಾಗಿ ಅನೇಕ ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ.

ಮಾತೃಭಾಷೆ ಎಂದರೇನು? ಮಕ್ಕಳಿಗೆ ಸುಲಲಿತವಾಗಿ ಅರ್ಥವಾಗುವ ಭಾಷೆಯನ್ನು ಇದು ಸೂಚಿಸುವುದೇ? ಈ ಪ್ರಶ್ನೆಯನ್ನು ಯಾರು ತೀರ್ಮಾನಿಸಬೇಕು? ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಾಧ್ಯಮ ನಿರ್ಧರಿಸುವ ಹಕ್ಕು ಮಗುವಿಗೆ, ಪೋಷಕರಿಗೆ ಅಥವಾ ನಾಗರಿಕರಿಗೆ ಇದೆಯೇ? ಮಾತೃಭಾಷೆ ಶಿಕ್ಷಣ ಮಾಧ್ಯಮದ ಹೇರಿಕೆಯು ಯಾವುದೇ ವಿಧದಲ್ಲಿ ಸಂವಿಧಾನದ ಕಲಂ 14 (ಸಮಾನತೆ ಹಕ್ಕು), ಕಲಂ 19 (ವಾಕ್ ಸ್ವಾತಂತ್ರ್ಯದ ಹಕ್ಕು), ಕಲಂ 29, 30 (ಅಲ್ಪಸಂಖ್ಯಾತರ ಶಿಕ್ಷಣದ ಹಕ್ಕು)  ಉಲ್ಲಂಘನೆ ಆಗಲಿದೆಯೇ?

ರಾಜ್ಯ ಸರ್ಕಾರ, ಸರ್ಕಾರಿ- ಖಾಸಗಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಸಂವಿಧಾನದ ಕಲಂ 350- ಎ ಅನ್ವಯ, ಭಾಷಾ ಅಲ್ಪಸಂಖ್ಯಾತರು ಪ್ರಾಥಮಿಕ ಹಂತದಲ್ಲಿ ಅವರ ಮಾತೃಭಾಷೆಯನ್ನೇ ಶಿಕ್ಷಣ ಮಾಧ್ಯಮವಾಗಿ ಆಯ್ಕೆ ಮಾಡಿಕೊಳ್ಳಲು ಬಲವಂತಪಡಿಸಬಹುದೇ ಎನ್ನುವ ಪ್ರಶ್ನೆಗಳನ್ನು ಸಂವಿಧಾನ ಪೀಠ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸಲಹೆ ಮಾಡಿದೆ. ಒಂದರಿಂದ ನಾಲ್ಕನೇ ತರಗತಿವರೆಗಿನ ಮಕ್ಕಳಿಗೆ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ ಶಿಕ್ಷಣ  ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 1994ರಲ್ಲಿ ಹೊರಡಿಸಿದ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.